ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ: ಎನ್‌ಐಎಗೆ ಪ್ರಕರಣ ಹಸ್ತಾಂತರಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಇತ್ತೀಚೆಗಷ್ಟೇ ಪ್ರಥಮ ತನಿಖಾ ವರದಿ ದಾಖಲಿಸಲಾಗಿದ್ದು, ಸರಿಯಾದ ರೀತಿಯಲ್ಲಿ ತನಿಖೆ ನಡೆಸಲಾಗಿಲ್ಲ ಎಂದು ತೀರ್ಮಾನಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ: ಎನ್‌ಐಎಗೆ ಪ್ರಕರಣ ಹಸ್ತಾಂತರಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಮತ್ತಿತರರು ಭಾಗಿಯಾಗಿರುವ ಸ್ಯಾಂಡಲ್‌ವುಡ ಡ್ರಗ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸುವಂತೆ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ನೇತೃತ್ವದ ವಿಭಾಗೀಯ ಪೀಠವು “ಉದ್ದೇಶಿತ ಪ್ರಕರಣವನ್ನು ಎನ್‌ಎಐಗೆ ವರ್ಗಾಯಿಸುವ ಕುರಿತ ಪ್ರಶ್ನೆಗೆ ಸಂಬಂಧಿಸಿದಂತೆ ಈ ಸನ್ನಿವೇಶದಲ್ಲಿ ನ್ಯಾಯಾಲಯ ಮುಂದಾಗುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿತು.

ಸೆಪ್ಟೆಂಬರ್ 4ರಂದು ಕನ್ನಡದ ಇಬ್ಬರು ನಟಿಯ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಎಫ್‌ಐಆರ್‌ ಬಗ್ಗೆಯೂ ನ್ಯಾಯಾಲಯ ಗಮನ ಹರಿಸಿತು. ಇತ್ತೀಚೆಗಷ್ಟೇ ಎಫ್‌ಐಆರ್ ದಾಖಲಿಸಲಾಗಿದೆ. ಹೀಗಿರುವಾಗ ತನಿಖೆಯನ್ನು ಸಮಂಜಸವಾಗಿ ನಡೆಸಿಲ್ಲ ಎಂದು ನಿರ್ಧರಿಸಲಾಗದು ಎಂದು ಹೇಳಿತು.

ಗೀತಾ ಮಿಶ್ರಾ ಅವರು ವಕೀಲ ಜಿ ಆರ್ ಮೋಹನ್ ಅವರ ಮೂಲಕ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸುವಂತೆ ಆರಂಭದಲ್ಲಿ ಕೋರಿದ್ದರು. ವಿಚಾರಣೆಯ ಸಂದರ್ಭದಲ್ಲಿ ವಕೀಲ ಮೋಹನ್ ಅವರು ಪ್ರಕರಣವನ್ನು ಎನ್‌ಐಎ ವರ್ಗಾಯಿಸುವಂತೆ ಮನವಿ ಮಾಡಿದರು.

ಎಸ್‌ಐಟಿ ನೇಮಿಸಲು ಒಪ್ಪದ ನ್ಯಾಯಾಲಯವು ಆದೇಶದಲ್ಲಿ ಹೀಗೆ ಹೇಳಿದೆ.

“ಕರ್ನಾಟಕದಲ್ಲಿರುವ ಕಾನೂನುಬಾಹಿರ ಡ್ರಗ್ ಜಾಲದ ತನಿಖೆ ನಡೆಸಲು ಎಸ್‌ಐಟಿ ನಿಯೋಜಿಸುವಂತೆ ಬೀಸು ಮನವಿಯೊಂದನ್ನು ಮಾಡಲಾಗಿದೆ. ನಿರ್ದಿಷ್ಟ ಅಪರಾಧಗಳನ್ನು ತನಿಖೆ ಮಾಡಲು ಎಸ್ಐಟಿ ಹುಟ್ಟು ಹಾಕಲಾಗುತ್ತದೆ. ಸಾಮಾನ್ಯವಾಗಿ, ಕರ್ನಾಟಕ ಅಥವಾ ಬೆಂಗಳೂರಿನ ಕುರಿತಾದ ಆರೋಪಿತ ಡ್ರಗ್ ಜಾಲ ಭೇದಿಸಲು ಎಸ್‌ಐಟಿ ನೇಮಿಸಲಾಗದು” ಎಂದು ಹೇಳಿದೆ.

ಸಮಾಜದ ಮೇಲ್‌ಸ್ತರದಲ್ಲಿರುವವರು ಡ್ರಗ್ಸ್‌ ತೆಗೆದುಕೊಂಡು ರಸ್ತೆ ಅಪಘಾತ ನಡೆಸಿದ್ದರ ಕುರಿತು ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದಾಗಿ ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು, ಇದಕ್ಕೆ ನ್ಯಾಯಪೀಠವು ಹೀಗೆ ಹೇಳಿತು.

Also Read
ರಾಗಿಣಿ, ಸಂಜನಾಗೆ ಜಾಮೀನು ನಿರಾಕರಿಸಿದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ

“2017-19ರವರೆಗೆ ನಡೆದ ಹಲವು ಘಟನೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆಯೇ ಅಥವಾ ತನಿಖೆ ಪೂರ್ಣಗೊಳಿಸಲಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಪ್ರಾತಿನಿಧ್ಯದ ಆಧಾರದಲ್ಲಿ ನಿರ್ದೇಶನಾ ಅರ್ಜಿ (ಮ್ಯಾಂಡಮಸ್ ರಿಟ್) ಜಾರಿಗೊಳಿಸಲಾಗದು. ಸರಿಯಾದ ರೀತಿಯಲ್ಲಿ ತನಿಖೆ ನಡೆಸದೇ ಇರುವುದರ ಕುರಿತು ನಿರ್ದಿಷ್ಟ ಪ್ರಕರಣಗಳ ಬಗ್ಗೆ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಬೇಕು “ ಎಂದು ನ್ಯಾಯಪೀಠ ಹೇಳಿದೆ.

ಮೋಜು ಕೂಟಗಳಲ್ಲಿ ನಿರ್ಬಂಧಿತ ಡ್ರಗ್ ಸೇವಿಸುವುದರ ಜೊತೆಗೆ ಮಾರಾಟದ ಆರೋಪದಲ್ಲಿ ರಾಗಿಣಿ ಮತ್ತು ಸಂಜನಾ ಅವರನ್ನು ಬಂಧಿಸಲಾಗಿದೆ. ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯವು ಸೋಮವಾರ ಇಬ್ಬರಿಗೂ ಜಾಮೀನು ನಿರಾಕರಿಸಿತ್ತು.

Related Stories

No stories found.
Kannada Bar & Bench
kannada.barandbench.com