ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ಸೆ.21ಕ್ಕೆ ಮುಂದೂಡಿಕೆ

ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ತನ್ನ ಹೆಸರು ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಬಂಧಿತ ನಟಿ ಸಂಜನಾ ಗಲ್ರಾನಿ ಅವರು ಜಾಮೀನು ಅರ್ಜಿಯಲ್ಲಿ ಬಲವಾಗಿ ವಾದಿಸಿದ್ದಾರೆ.
Ragini Dwivedi, Sanjana Galrani
Ragini Dwivedi, Sanjana Galrani
Published on

ಸ್ಯಾಂಡಲ್‌ವುಡ್ ಡ್ರಗ್ ಹಗರಣಕ್ಕೆ ಸಂಬಂಧಿಸಿದಂತೆ ಎನ್‌ ಡಿಪಿಎಸ್ ವಿಶೇಷ ನ್ಯಾಯಾಲಯವು ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ. ಮಾದಕ ದ್ರವ್ಯ ಮತ್ತು ಮಾನಸಿಕ ವ್ಯಸನ ಪದಾರ್ಥಗಳ ಕಾಯಿದೆ-1985 (ಎನ್‌ ಡಿಪಿಎಸ್‌) ನಿಬಂಧನೆಗಳು ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಇಬ್ಬರೂ ನಟಿಯರನ್ನು ಬಂಧಿಸಲಾಗಿತ್ತು.

ಕೇಂದ್ರೀಯ ಅಪರಾಧ ದಳ (ಸಿಸಿಬಿ) ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಣೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ 33ನೇ ಸೆಷನ್ಸ್ ನ್ಯಾಯಾಲಯವು ಆರೋಪಿಗಳ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಿತು. ಇದರಿಂದ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರ ವಾಸ್ತವ್ಯ ಮುಂದುವರಿಯಲಿದೆ.

ಮೋಜು ಕೂಟಗಳಲ್ಲಿ ನಿರ್ಬಂಧಿತ ಮಾದಕ ವಸ್ತಗಳನ್ನು ಸೇವಿಸಿದ ಮತ್ತು ಹಂಚಿಕೆ ಮಾಡಿದ ಆರೋಪದ ಮೇಲೆ ಸ್ವಯಂ ಪ್ರೇರಿತವಾಗಿ ಸಿಸಿಬಿ ಪೊಲೀಸರು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅವರನ್ನು ವಶಕ್ಕೆ ಪಡೆದಿದ್ದರು. ವಿವಿಧ ರಾಜ್ಯ ಮತ್ತು ಹೊರದೇಶಗಳಿಂದ ಮಾದಕ ವಸ್ತುಗಳನ್ನು ತರಿಸಿಕೊಳ್ಳಲು ಸಂಜನಾ ಗಲ್ರಾಣಿ ಅವರು ತಂಡ ರಚಿಸಿದ್ದರು ಎಂಬ ಆರೋಪವಿದೆ. ಫಾರ್ಮ್ ಹೌಸ್‌ ಗಳು, ಪಂಚತಾರಾ ಹೋಟೆಲ್ ಗಳು, ಕ್ಲಬ್, ಪಬ್ ಮತ್ತಿತರೆಡೆ ನಡೆಯುವ ಮೋಜು ಕೂಟಗಳಲ್ಲಿ ಸಂಜನಾ ಅವರ ತಂಡ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿತ್ತು ಎಂದು ಮಾಹಿತಿದಾರ ಆರೋಪಿಸಿದ್ದಾರೆ.

ಸಂಜನಾ ಮನೆಯಲ್ಲಿ ಶೋಧ ನಡೆಸಿದ್ದ ಪೊಲೀಸರು ಸೆಪ್ಟೆಂಬರ್ 8ರಂದು ಅವರನ್ನು ಬಂಧಿಸಿದ್ದರು. ಎಫ್‌ಐಆರ್ ನಲ್ಲಿ ಅವರ ಹೆಸರು ಉಲ್ಲೇಖಿಸಿಲ್ಲ. ಮಾದಕ ವಸ್ತುಗಳ ಸಂಗ್ರಹ ಮತ್ತು ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಂಜನಾ ಪರ ಜಾಮೀನು ಮನವಿ ಸಲ್ಲಿಸಿರುವ ವಕೀಲ ಶ್ರೀನಿವಾಸ್ ರಾವ್ ಬಲವಾಗಿ ವಾದಿಸಿದರು.

“ಸದರಿ ಪ್ರಕರಣದಲ್ಲಿ ಆರೋಪಿಯ ಪಾತ್ರವಿಲ್ಲ. ಸಂಜನಾ ಸಿನಿಮಾ ತಾರೆಯಾಗಿರುವುದರಿಂದ ಅವರನ್ನು ಆರೋಪಿತರನ್ನಾಗಿಸಲಾಗಿದೆ. ಆರೋಪಿ ಮುಗ್ಧೆಯಾಗಿದ್ದು, ಮಾದಕ ವಸ್ತು ಸಂಗ್ರಹ ಮತ್ತು ಮಾರಾಟದಲ್ಲಿ ಆರೋಪಿಯ ವಿರುದ್ಧ ಯಾವುದೇ ಆರೋಪ ಮಾಡಲಾಗಿಲ್ಲ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಲಾಗಿದೆ.
Also Read
ನಟಿ ರಿಯಾ, ಶೌವಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌‌ಡಿಪಿಎಸ್‌ ವಿಶೇಷ ನ್ಯಾಯಾಲಯ

ಗಲ್ರಾಣಿ ವಿರುದ್ಧದ ಆರೋಪಗಳು ಜಾಮೀನು ರಹಿತವಾಗಿದ್ದು, ಆರೋಪ ಸಾಬೀತಾದರೆ ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.

ರಾಗಿಣಿ ದ್ವಿವೇದಿ ಅವರ ಪರವಾಗಿ ವಕೀಲ ಕಲ್ಯಾಣ್ ಕುಮಾರ್ ಅವರು ಜಾಮೀನು ಮನವಿ ಸಲ್ಲಿಸಿದ್ದಾರೆ. ರಾಗಿಣಿ ಅವರನ್ನು ಹಿಂದೆ ಪ್ರತಿನಿಧಿಸುತ್ತಿದ್ದ ವಕೀಲ ಸುದರ್ಶನ್ ಸುರೇಶ್ ಅವರು ಬಾರ್ ಅಂಡ್ ಬೆಂಚ್ ಜೊತೆ ಮಾತನಾಡಿ “ರಾಗಿಣಿ ಅವರ ಕುಟುಂಬವು ಬರವಣಿಗೆಯಲ್ಲಿ ಪ್ರಕರಣದಿಂದ ನಿವೃತ್ತಿ ಪಡೆಯುವಂತೆ ಕೋರಿದ್ದರಿಂದ ಹಿಂದೆ ಸರಿಯಲಾಯಿತು” ಎಂದು ತಿಳಿಸಿದ್ದಾರೆ.

Kannada Bar & Bench
kannada.barandbench.com