ಸಂದೇಶ್‌ಖಾಲಿ ಪ್ರಕರಣದ ಆರೋಪಿ ಶಹಜಹಾನ್ ಅರ್ಜಿ ತುರ್ತು ವಿಚಾರಣೆಗೆ ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್‌

"ಆ ವ್ಯಕ್ತಿಯ (ಶಹಜಹಾನ್) ಬಗ್ಗೆ ನಮಗೆ ಯಾವುದೇ ಸಹಾನುಭೂತಿ ಇಲ್ಲ. ದಯವಿಟ್ಟು ಸೋಮವಾರ ಬನ್ನಿ, ಈಗ ಅಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಇಂದು ಹೇಳಿದರು.
ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್

ಸಂದೇಶ್‌ಖಾಲಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಕಳೆದ ರಾತ್ರಿ ಬಂಧಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಶಹಜಹಾನ್ ಅರ್ಜಿಯ ತುರ್ತು ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಶಹಜಹಾನ್ ಪರ ವಕೀಲರು ಇಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾಗಿ ಪ್ರಕರಣ ಉಲ್ಲೇಖಿಸಲು ಯತ್ನಿಸಿದರು.

ಶಹಜಹಾನ್ ಅವರನ್ನು ರಾಜ್ಯ ಪೊಲೀಸರು ಬಂಧಿಸುವ ಕೆಲ ದಿನಗಳ ಮೊದಲು ನ್ಯಾಯಾಲಯ ಅವರ ವಿರುದ್ಧ ಮಾಡಿದ ಕೆಲವು ನಿರ್ಣಾಯಕ ಅವಲೋಕನಗಳ ಬಗ್ಗೆ ವಕೀಲರು ಕಳವಳ ವ್ಯಕ್ತಪಡಿಸಿದರು.

"ನನ್ನ ಕಕ್ಷಿದಾರರ ವಿರುದ್ಧ ಘನತೆವೆತ್ತ ತಾವು ಕೆಲ ಅವಲೋಕನಗಳನ್ನು ಮಾಡಿದ್ದೀರಿ" ಎಂದ ವಕೀಲರು ಹೇಳಿದಾಗ "ಅದ್ಭುತ, ನಾವು ನಿಮಗಾಗಿಯೇ ಕಾಯುತ್ತಿದ್ದೆವು" ಎಂದು ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅಸಮಾಧಾನದಿಂದ ನುಡಿದರು. ಟಿಎಂಸಿಯ ಪ್ರಬಲ ವ್ಯಕ್ತಿಯನ್ನು ಬಂಧಿಸುವ ಮೊದಲು ಆತ ತಲೆಮರೆಸಿಕೊಂಡಿದ್ದನ್ನು ಪ್ರಸ್ತಾಪಿಸಿದರು.

ಶಹಜಹಾನ್ ಅವರನ್ನು ಬಂಧಿಸಿದಾಗ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇತ್ತು ಎಂದು ವಕೀಲರು ಗಮನಸೆಳೆದರು. ಅದಕ್ಕೂ ತೃಪ್ತರಾಗದ ನ್ಯಾಯಮೂರ್ತಿಗಳು "ಮಾನ್ಯ ವಕೀಲರೇ, ಈ ವ್ಯಕ್ತಿ (ಶಹಜಹಾನ್) ವಿರುದ್ಧ ಸುಮಾರು 43 ಪ್ರಕರಣಗಳು ದಾಖಲಾಗಿವೆ. ನೆನಪಿಡಿ, ಮುಂದಿನ 10 ವರ್ಷಗಳವರೆಗೆ ಈ ವ್ಯಕ್ತಿ ನಿಮ್ಮನ್ನು ಬಿಡುವಿಲ್ಲದಂತೆ ಇಡುತ್ತಾನೆ. ಕನಿಷ್ಠ ಮುಂದಿನ 10 ವರ್ಷಗಳವರೆಗೆ ನೀವು ಅವರ ಎಲ್ಲಾ ಪ್ರಕರಣಗಳನ್ನು ನಿರ್ವಹಿಸಬೇಕಾಗುತ್ತದೆ" ಎಂದು ಮುಖ್ಯ ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಯಾಗಿ, ವಕೀಲರು ತಮ್ಮ ಪ್ರಕರಣ ಆಲಿಸುವಂತೆ ಪೀಠವನ್ನು ಒತ್ತಾಯಿಸಿದರು.

ಶೇಖ್‌ ಅವರ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು ಕಳೆದ ರಾತ್ರಿ ಅವರನ್ನು ಬಂಧಿಸಲಾಗಿದೆ. ಹೈಕೋರ್ಟ್‌ನ ಸಾಮಾನ್ಯ ಪೀಠದ ಮುಂದೆ ನಾನು ಈಗ ಪ್ರಕರಣ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ವಕೀಲರು ತಿಳಿಸಿದರು.

ಆದರೂ ತಾನು ಇಂದು ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು. "ಆ ವ್ಯಕ್ತಿಯ (ಶಹಜಹಾನ್) ಬಗ್ಗೆ ನಮಗೆ ಯಾವುದೇ ಸಹಾನುಭೂತಿ ಇಲ್ಲ. ದಯವಿಟ್ಟು ಸೋಮವಾರ ಬನ್ನಿ, ಈಗ ಅಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮಾಜಿ  ಜ್ಯೋತಿಪ್ರಿಯೋ ಮಲ್ಲಿಕ್ ಅವರೊಂದಿಗೆ ಶಹಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ವರ್ಷದ ಜನವರಿ 5ರಂದು, ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಅಕುಂಜಿಪಾರಾದಲ್ಲಿರುವ ಶಹಜಹಾನ್ ಅವರ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ ಇ ಡಿ ಅಧಿಕಾರಿಗಳನ್ನು ಸುಮಾರು 200 ಸ್ಥಳೀಯರು ಸುತ್ತುವರಿದು ಘೇರಾವ್ ಹಾಕಿದ ಆರೋಪ ಕೇಳಿ ಬಂದಿತ್ತು.

ನಂತರದ ಘರ್ಷಣೆಯಲ್ಲಿ ಇ ಡಿ ಅಧಿಕಾರಿಗಳು ಗಾಯಗೊಂಡಿದ್ದರು. ಘಟನೆ ಹಿನ್ನೆಲೆಯಲ್ಲಿ ಶಹಜಹಾನ್‌ ಅವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್‌ ಬೋಸ್‌ ಸೂಚಿಸಿದ್ದರು.

Related Stories

No stories found.
Kannada Bar & Bench
kannada.barandbench.com