ಸಂದೇಶ್‌ಖಾಲಿ ಅತ್ಯಾಚಾರ ಪ್ರಕರಣ ಹಿಂಪಡೆಯಲು ಒತ್ತಡ ಆರೋಪ: ತುರ್ತು ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ನಕಾರ

ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು ನಿಮ್ಮ ಸಮಸ್ಯೆಗಳನ್ನು ಸಿಬಿಐಗೆ ವರದಿ ಮಾಡಿ ಎಂದು ನ್ಯಾಯಾಲಯವು ಬಿಜೆಪಿ ನಾಯಕಿ ಮತ್ತು ವಕೀಲೆ ಪ್ರಿಯಾಂಕಾ ಟಿಬ್ರೆವಾಲ್‌ ಅವರಿಗೆ ತಿಳಿಸಿತು.
Calcutta High Court, Sandeshkhali violence
Calcutta High Court, Sandeshkhali violence
Published on

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಂದೇಶ್‌ಖಾಲಿ ಮಹಿಳೆಯರನ್ನು ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕಿ ಮತ್ತು ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಅವರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು ನಿಮ್ಮ ಸಮಸ್ಯೆಗಳನ್ನು ಸಿಬಿಐಗೆ ವರದಿ ಮಾಡಿ ಎಂದು ಟಿಬ್ರೆವಾಲ್‌ಗೆ ಅವರಿಗೆ ತಿಳಿಸಿತು.

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಈ ಮುನ್ನ ಕೋರಿದ ಟಿಬ್ರೆವಾಲ್‌ “ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿ ಮಲಗುತ್ತಿಲ್ಲ ಹೆದರಿ ಹೊಲಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಪೊಲೀಸರು ಮನೆಗಳಿಗೆ ನುಗ್ಗಿ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ನಿನ್ನೆಯಷ್ಟೇ ಅತ್ಯಾಚಾರ ಸಂತ್ರಸ್ತೆಯೊಬ್ಬಳ ಕೈಕಟ್ಟಿ ಕೊಳವೊಂದಕ್ಕೆ ಎಸೆದಿದ್ದಾರೆ” ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ವಕೀಲರು ಟಿಬ್ರೆವಾಲ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿದಾಗಲೆಲ್ಲ ಈ ಪ್ರದೇಶದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ಎಂದು ದೂರಿದರು.

ಪಕ್ಷದಿಂದ ಅಮಾನತುಗೊಂಡಿದ್ದ ಟಿಎಂಸಿ ಪ್ರಬಲ ವ್ಯಕ್ತಿ ಶಹಜಹಾನ್ ಶೇಖ್ ಅವರು ಸಂದೇಶಖಾಲಿ ನಿವಾಸಿಗಳ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಮದ ಮಹಿಳೆಯರ ಮೇಲೆ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಅವರನ್ನು ಕಡೆಗೆ ಪ. ಬಂಗಾಳ ಪೊಲೀಸರು ಬಂಧಿಸಿದ್ದರು. ಏಪ್ರಿಲ್ 10 ರಂದು ನೀಡಿದ್ದ ಆದೇಶದಲ್ಲಿ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಆದರೆ ಬಿಜೆಪಿ ನಾಯಕರು ಟಿಎಂಸಿ ಕಾರ್ಯಕರ್ತರ ವಿರುದ್ಧ ಬಲವಂತವಾಗಿ ದೂರು ದಾಖಲಿಸಿದ್ದಾರೆ ಎಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಈಚೆಗೆ ಆರೋಪಿಸಿದ್ದರು.

Kannada Bar & Bench
kannada.barandbench.com