ಸಂದೇಶ್‌ಖಾಲಿಯಲ್ಲಿನ ಲೈಂಗಿಕ ದೌರ್ಜನ್ಯ ಆರೋಪ ಅಲ್ಪ ಪ್ರಮಾಣದಲ್ಲಿ ಸತ್ಯವಾದರೂ ನಾಚಿಕೆಗೇಡು: ಕಲ್ಕತ್ತಾ ಹೈಕೋರ್ಟ್‌

ಸಂದೇಶ್‌ಖಾಲಿಯಲ್ಲಿನ ಲೈಂಗಿಕ ದೌರ್ಜನ್ಯ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆ ಅಥವಾ ಬೇಡವೇ ಎಂಬುದಕ್ಕೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿದೆ.
Calcutta High Court, Sandeshkhali violence
Calcutta High Court, Sandeshkhali violence

ಸಂದೇಶ್‌ಖಾಲಿ ಗ್ರಾಮದಲ್ಲಿನ ಜನರು ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರಿಂದ ಪದೇಪದೇ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿರುವುದು ಒಂದುವೇಳೆ ಸಣ್ಣಮಟ್ಟಕ್ಕೆ ಸತ್ಯವಾದರೂ ಸಹ ಅದು ಪಶ್ಚಿಮ ಬಂಗಾಳಕ್ಕೆ ಅಪಖ್ಯಾತಿ ತರಲಿದೆ ಎಂದು ಈಚೆಗೆ ಕಲ್ಕತ್ತಾ ಹೈಕೋರ್ಟ್‌ ಹೇಳಿದೆ.

ಸಂದೇಶ್‌ಖಾಲಿಯಲ್ಲಿನ ಪರಿಸ್ಥಿತಿಗೆ ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್‌ ಭಟ್ಟಾಚಾರ್ಯ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ಬಿಜೆಪಿ ನಾಯಕಿ ಮತ್ತು ವಕೀಲೆ ಪ್ರಿಯಾಂಕಾ ಟಿಬ್ರೆವಾಲ್‌ ಅವರು ಸಂದೇಶ್‌ಖಾಲಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರ ಮಾಹಿತಿಯನ್ನು ಒಳಗೊಂಡ ಅಫಿಡವಿಟ್‌ ಸಾವಿರಾರು ಪುಟಗಳನ್ನು ಮೀರುತ್ತದೆ ಎಂದರು.

“ಸಂದೇಶ್‌ಖಾಲಿ ಪ್ರದೇಶದಲ್ಲಿನ ಹಲವು ಮಹಿಳೆಯರು ಮತ್ತು ಪುರುಷರ ಅಫಿಡವಿಟ್‌ ನನ್ನ ಬಳಿ ಇವೆ. ಒಬ್ಬೇ ಒಬ್ಬ ಶಹಜಹಾನ್‌ನನ್ನು ಬಂಧಿಸಲಾಗಿದ್ದು, 1000 ಶಹಜಹಾನ್‌ಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಆರಾಮವಾಗಿ ಓಡಾಡುತ್ತಿದ್ದಾರೆ. ಶಹಜಹಾನ್‌ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು ಎಂದು ಬೆದರಿಕೆಯೊಡ್ಡುತ್ತಿದ್ದು, ಮಹಿಳೆಯರು ದೂರು ನೀಡಿದರೆ ಅವರ ಪತಿಯಂದಿರು, ಮಕ್ಕಳ ರುಂಡ ಕತ್ತರಿಸಿ, ಫುಟ್‌ಬಾಲ್‌ ಆಡುವುದಾಗಿ ಹೇಳುತ್ತಿದ್ದಾರೆ” ಎಂದು ಟಿಬ್ರೆವಾಲ್‌ ಆಪಾದಿಸಿದರು.

ಇದಕ್ಕೆ ಆಕ್ಷೇಪಿಸಿದ ಅಡ್ವೊಕೇಟ್‌ ಜನರಲ್‌ ಕಿಶೋರ್‌ ದತ್ತಾ ಅವರು “ಏನಾದರೂ ಆದ ತಕ್ಷಣ ಟಿಬ್ರೆವಾಲ್‌ ಅವರು ಹಾಜರಾಗುತ್ತಾರೆ. ಇದನ್ನು ಆಕೆ ಸಾಮಾನ್ಯ ವ್ಯಕ್ತಿಯಾಗಿ ಮಾಡುತ್ತಾರೋ ಅಥವಾ ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಮಾಡುತ್ತಾರೋ ಎಂಬುದನ್ನು ತಿಳಿಸಬೇಕು. ಚುನಾವಣೋತ್ತರ ಗಲಭೆಯಲ್ಲೂ ಆಕೆ ಸಾಮಾನ್ಯ ವ್ಯಕ್ತಿಯಾಗಿ ಹಾಜರಾಗಿದ್ದರೋ ಅಥವಾ ರಾಜಕೀಯ ಪಕ್ಷದ ಪ್ರತಿನಿಧಿಯಾಗಿದ್ದರೋ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಶೋಧನೆ ಅಗತ್ಯ. ನ್ಯಾಯಾಲಯದ ಮುಂದೆ ಬರುವುದಕ್ಕೂ ಮುನ್ನ ಈ ಜನರು ಯಾವ ಸಂಶೋಧನೆ ನಡೆಸಿದ್ದಾರೆ. ಘಟನೆ ನಡೆದ ಬಳಿಕ ಮಾಹಿತಿ ಸಂಗ್ರಹಿಸುವುದು ಸಂಶೋಧನೆಯಾಗದು. ಯಾವುದೇ ಘಟನೆಯನ್ನು ಹೊರತುಪಡಿಸಿ ನಡೆಸುವುದನ್ನು ಸಂಶೋಧನೆ ಎನ್ನಲಾಗುತ್ತದೆ. ನಿರ್ದಿಷ್ಟ ವರ್ಗದ ಜನರಿಗೆ 20 ವರ್ಷಗಳ ಕಾಲ ಅವರ ಹಕ್ಕು ನಿರಾಕರಿಸಿರುವ ವಿಚಾರ ಎತ್ತಿಕೊಂಡು ನ್ಯಾಯಾಲಯದ ಮೆಟ್ಟಿಲೇರುವುದು ಇದಕ್ಕೆ ಒಂದು ಉದಾಹರಣೆ. ಘಟನೆ ನಡೆದ ಬಳಿಕ ಪಿಐಎಲ್‌ ಏಕೆ ದಾಖಲಿಸಲಾಗುತ್ತದೆ? ಈಗಾಗಲೇ 42 ಎಫ್‌ಐಆರ್‌ ದಾಖಲಿಸಲಾಗಿದೆ. ಈ ಎಫ್‌ಐಆರ್‌ಗಳನ್ನ ದಾಖಲಿಸುವಾಗ ಈ ಜನರು ಎಲ್ಲಿ ಹೋಗಿದ್ದರು” ಎಂದು ಪ್ರಶ್ನಿಸಿದರು.

ಅದಾಗ್ಯೂ, ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಗಂಭೀರ ನೋಟ ಬೀರಿದೆ. “ಒಂದೊಮ್ಮೆ ಒಂದೇ ಒಂದು ಅಫಿಡವಿಟ್‌ ಸರಿಯಾಗಿದ್ದರೂ ಅದು ನಾಚಿಕೆಗೇಡು. ಇಡೀ ಜಿಲ್ಲಾಡಳಿತ ಮತ್ತು ಆಡಳಿತ ನಡೆಸುವ ಸರ್ಕಾರ ನೈತಿಕ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಜನರ ಸುರಕ್ಷತೆಗೆ ಸಂಬಂಧಿಸಿದ ವಿಚಾರ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ ರಾಷ್ಟ್ರೀಯ ಆಯೋಗದ ವರದಿಯನ್ನು ಪರಿಶೀಲಿಸಿದರೆ ಶೇ.1ರಷ್ಟು ಸತ್ಯವಿದ್ದರೂ ಅದು ಶೇ.100ರಷ್ಟು ನಾಚಿಕೆಗೇಡು. ಟಿಬ್ರೆವಾಲ್‌ ಅವರು ನೀಡಿರುವ ಒಂದು ಅಫಿಡವಿಟ್‌ ಸತ್ಯವಾದರೂ ಅಂಕಿ-ಸಂಖ್ಯೆ ತಲೆಕೆಳಕಾಗಲಿದೆ. ಸಾರ್ವಜನಿಕ ವರ್ಚಸ್ಸು ಕಳೆಗುಂದಿದರೆ, ಅಭಿಪ್ರಾಯ ಕುಂದಲಿದೆ. ಇದು ಕೈಕೊಟ್ಟರೆ ಅದನ್ನು ಮರುಸ್ಥಾಪಿಸಲಾಗದು” ಎಂದು ಸಿಜೆ ಶಿವಜ್ಞಾನಂ ಹೇಳಿದರು.

ಅಂತಿಮವಾಗಿ ಪೀಠವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆ ಎಂಬುದಕ್ಕೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದೆ. 

Kannada Bar & Bench
kannada.barandbench.com