ಸಂದೇಶ್‌ಖಾಲಿ: ಪ. ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಲೋಕಸಭಾ ಹಕ್ಕುಬಾಧ್ಯತಾ ಸಮಿತಿ ನೀಡಿದ್ದ ಸಮನ್ಸ್‌ಗೆ ಸುಪ್ರೀಂ ತಡೆ

ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಕ್ರೌರ್ಯದಿಂದ ನಡೆದುಕೊಂಡಿದ್ದಲ್ಲದೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್‌ ಮಜೂಂದಾರ್‌ ನೀಡಿದ್ದ ದೂರು ಆಧರಿಸಿ ಸಮಿತಿ ಸಮನ್ಸ್‌ ನೀಡಿತ್ತು.
ಸಂದೇಶ್ ಖಲಿ ಹಿಂಸಾಚಾರ ಮತ್ತು ಸರ್ವೋಚ್ಚ ನ್ಯಾಯಾಲಯ
ಸಂದೇಶ್ ಖಲಿ ಹಿಂಸಾಚಾರ ಮತ್ತು ಸರ್ವೋಚ್ಚ ನ್ಯಾಯಾಲಯ

ಸಂದೇಶ್‌ಖಾಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ್‌ ಮಜುಂದಾರ್ ಸಲ್ಲಿಸಿದ ದೂರಿನ ಮೇರೆಗೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಾಲಿಕಾ ಮತ್ತಿತರ ಅಧಿಕಾರಿಗಳಿಗೆ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ನೀಡಿದ್ದ ಸಮನ್ಸ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.

ಲೋಕಸಭಾ ಸೆಕ್ರೆಟರಿಯೇಟ್‌ಗೆ ನೋಟಿಸ್ ಜಾರಿಗೊಳಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹಕ್ಕುಬಾಧ್ಯತಾ ಸಮಿತಿಯ ಮುಂದಿನ ವಿಚಾರಣೆಗೆ ತಡೆ ನೀಡಿದೆ.

ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಕ್ರೌರ್ಯದಿಂದ ನಡೆದುಕೊಂಡಿದ್ದಲ್ಲದೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್‌ ಮಜೂಂದಾರ್‌ ನೀಡಿದ್ದ ದೂರು ಆಧರಿಸಿ ಸಮಿತಿ ಸಮನ್ಸ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಗೋಪಾಲಿಕಾ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಮತ್ತವರ ಸಹಾಯಕರು ತಮ್ಮ ವಿರುದ್ಧ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಸಂದೇಶ್‌ ಖಾಲಿ ಪ್ರದೇಶಕ್ಕೆ ಪ್ರವೇಶಿಸದಂತೆ ಮಜುಂದಾರ್ ಅವರನ್ನು ತಡೆಹಿಡಿಯಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಸಹಾಯಕ ಅಧೀಕ್ಷಕರಿಗೂ ಸಮಿತಿ ಸಮನ್ಸ್‌ ನೀಡಿತ್ತು.

ಪಶ್ಚಿಮ ಬಂಗಾಳದ ಅಧಿಕಾರಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಹಕ್ಕುಚ್ಯುತಿಯಾಗಿರುವುದನ್ನು ಪ್ರಶ್ನಿಸಿದರು.

ರಾಜಕೀಯ ಚಟುವಟಿಕೆ ಹಕ್ಕುಚ್ಯುತಿಯಾಗುವುದಿಲ್ಲ ಎಂದು ಸಿಬಲ್ ಅವರು ವಾದಿಸಿದರೆ, ಅಂತಹ ವಿಷಯಗಳಿಗೆ ವಿಶೇಷಾಧಿಕಾರ ನೀಡಲಾಗಿಲ್ಲ ಎಂದು ಸಿಂಘ್ವಿ ಪ್ರತಿಪಾದಿಸಿದರು.

ಲೋಕಸಭೆ ಸಚಿವಾಲಯದ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವಶಿಶ್ ಭರೂಕಾ ಅವರು, ಹಕ್ಕುಬಾಧ್ಯತಾ ಸಮಿತಿಯ ಕಾರ್ಯಕಲಾಪಗಳು ವಾಡಿಕೆಯವಾಗಿದ್ದು ಸಮಿತಿ ತಪ್ಪೆಸಗಿರುವುದನ್ನು ಸೂಚಿಸುವುದಿಲ್ಲ. ಸಂಸದರೊಬ್ಬರು ನೋಟಿಸ್‌ ನೀಡಿದಾಗ ಇದರಲ್ಲಿ ಪರಿಶೀಲಿಸುವಂಥದ್ದು ಏನೋ ಇದೆ ಎಂದು ಸ್ಪೀಕರ್‌ ಭಾವಿಸುತ್ತಾರೆ ಎಂದರು.

ಆದರೂ, ಲೋಕಸಭಾ ಸಚಿವಾಲಯಕ್ಕೆ ನೋಟಿಸ್ ನೀಡಿದ ಸಿಜೆಐ ಅವರು ಹಕ್ಕುಬಾಧ್ಯತಾ ಸಮಿತಿಯ ವಿಚಾರಣೆಗೆ ತಡೆ ನೀಡಿದರು.

Kannada Bar & Bench
kannada.barandbench.com