ಸಂದೇಶ್‌ಖಾಲಿ ಹಿಂಸಾಚಾರ: ಸಿಬಿಐಗೆ ಸಹಕರಿಸಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಸೂಚನೆ

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಮತ್ತು ಬುಡಕಟ್ಟು ಜನಾಂಗದವರ ಭೂಮಿ ಕಬಳಿಕೆ ಆರೋಪಗಳ ತನಿಖೆ ನಡೆಸುತ್ತಿರುವ ಸಿಬಿಐಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
Calcutta High Court, Sandeshkhali violence
Calcutta High Court, Sandeshkhali violence

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಷಹಜಹಾನ್ ಶೇಖ್ ಮತ್ತು ಆತನ ಸಹಚರರು ಸಂದೇಶಖಾಲಿಯಲ್ಲಿನ ಬುಡಕಟ್ಟು ಜನಾಂಗದವರ ಭೂಮಿ ಕಬಳಿಸಿದ ಮತ್ತು ಮಹಿಳೆಯರ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐಗೆ ಸಹಕಾರ ನೀಡುವಂತೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ [ನ್ಯಾಯಾಲಯದ ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು  ಪಶ್ಚಿಮ ಬಂಗಾಳ  ಸರ್ಕಾರ ನಡುವಣ ಪ್ರಕರಣ].

ಆದಿವಾಸಿಗಳ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ಬಂದಿರುವ 900ಕ್ಕೂ ಹೆಚ್ಚು ದೂರುಗಳನ್ನು ಪರಿಶೀಲಿಸಿದ  ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ಪೀಠ ರಾಜ್ಯ ಸರ್ಕಾರ ತನ್ನ ಜೊತೆ ಸಹಕರಿಸುತ್ತಿಲ್ಲ ಎಂಬ ಸಿಬಿಐ ವಾದವನ್ನು ಗಣನೆಗೆ ತೆಗೆದುಕೊಂಡಿತು.  

ಟಿಎಂಸಿಯಿಂದ ಅಮಾನತುಗೊಂಡಿದ್ದ ಶೇಖ್ ಅವರು ಗ್ರಾಮದ ನಿವಾಸಿಗಳ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.  ಶೇಖ್ ಮತ್ತು ಸಹಚರರು ಗ್ರಾಮದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಸುಮಾರು 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಶೇಖ್‌ ಅವರನ್ನು ಅಂತಿಮವಾಗಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ಏಪ್ರಿಲ್ 10 ರಂದು ನೀಡಿದ್ದ ಆದೇಶದಲ್ಲಿ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಬಿಜೆಪಿ ಮುಖಂಡ ಮತ್ತು ವಕೀಲ ಪ್ರಿಯಾಂಕ್‌ ತಿಬ್ರೆವಾಲ್ ಅವರು ಆಪಾದಿತ ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಂದ ಫೋನ್ ಕರೆ ಸ್ವೀಕರಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಶೇಖ್ ಅಥವಾ ಆತನ ಸಹಚರರ ವಿರುದ್ಧ ಪ್ರಕರಣಗಳನ್ನು ದಾಖಲಿಸದಂತೆ ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ ಎಂದರು.

ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಅಲಖ್ ಶ್ರೀವಾಸ್ತವ, ಮಣಿಪುರ ಹಿಂಸಾಚಾರ ಪ್ರಕರಣದಂತೆ ಅಖಿಲ ಮಹಿಳಾ ಸಮಿತಿ  ರಚಿಸಬೇಕು ಅಥವಾ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲು ಮಹಿಳಾ ಅಧಿಕಾರಿಗಳನ್ನು ಮಾತ್ರ ಕಳುಹಿಸಲು ಸಿಬಿಐಗೆ ಸೂಚಿಸಬೇಕು ಎಂದು ಪೀಠವನ್ನು ಕೋರಿದರು.

ಆದರೆ ನ್ಯಾಯಾಲಯ ಇದು ಸಿಬಿಐ ವಿವೇಚನೆಗೆ ಬಿಟ್ಟ ವಿಚಾರ ಎಂದಿತು. ಜೂನ್ 14ರಂದು ಪ್ರಕರಣದ  ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com