ಪತ್ನಿಯ ಮೇಲೆ ಹಲ್ಲೆ, ಬಲಾತ್ಕಾರ ನಡೆಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಬಂಧಿತನಾಗಿರುವ ಹಾಗೂ ಹಲವು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಸಾಧಿಸಿ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜನವರಿ 30ರವರೆಗೆ ಸಿಐಡಿ ವಶಕ್ಕೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಅವರು ಆರೋಪಿ ರವಿಯನ್ನು ಸಿಐಡಿ ಪೊಲೀಸರ ವಶಕ್ಕೆ ನೀಡಿದರು.
ಮೈಸೂರಿನ ವಿಜಯನಗರ ಠಾಣೆಯಲ್ಲಿ ರವಿಯ ಎರಡನೇ ಪತ್ನಿ ದಾಖಲಿಸಿರುವ ದೂರು, ರವಿ ಮಾತು ಕೇಳಿಕೊಂಡು ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ರವಿ ಪತ್ನಿ ಮೇಲೆ ದಾಖಲಿಸಿದ್ದ ನಕಲಿ ಪ್ರಕರಣ ಹಾಗೂ ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ರವಿಯ ಪಾತ್ರದ ಕುರಿತು ಸಿಐಡಿ ಪೊಲೀಸರಿಗೆ ತನಿಖೆ ನಡೆಸಲು ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
ಕಳೆದ ಶುಕ್ರವಾರ ಗುಜರಾತ್‌ನಲ್ಲಿ ರವಿಯನ್ನು ಬಂಧಿಸಿದ್ದ ಪೊಲೀಸರು ಆತನನ್ನು ಮೈಸೂರಿನಲ್ಲಿ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯುವ ಉದ್ದೇಶದಿಂದ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಸೂಕ್ತ ಅರ್ಜಿಯೊಂದಿಗೆ ಪೊಲೀಸ್ ಕಸ್ಟಡಿಗೆ ಕೋರುವಂತೆ ನ್ಯಾಯಾಲಯ ಆದೇಶಿಸಿತ್ತು. ಇಂದು ಸರ್ಕಾರದ ಆದೇಶವನ್ನು ಪರಿಗಣಿಸಿ ರವಿಯನ್ನು ಸಿಐಡಿ ವಶಕ್ಕೆ ನ್ಯಾಯಾಲಯವು ಒಪ್ಪಿಸಿದೆ.