ಕಾನೂನುಬದ್ಧ ಹಿಂದೂ ವಿವಾಹಕ್ಕೆ ಸಪ್ತಪದಿ ಅತ್ಯಗತ್ಯ: ದ್ವಿಪತಿತ್ವ ಪ್ರಕರಣ ರದ್ದುಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಹಿಂದೂ ಕಾನೂನಿನ ಅಡಿಯಲ್ಲಿ ಸಪ್ತಪದಿ ಸಮಾರಂಭ ಕಾನೂನುಬದ್ಧ ವಿವಾಹದ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಅದು ನಡೆದಿದೆ ಎಂದು ಹೇಳುವ ಪುರಾವೆಗಳ ಕೊರರೆ ಇದೆ ಎಂದು ಪೀಠ ನುಡಿದಿದೆ.
Allahabad High Court, Marriage
Allahabad High Court, Marriage
Published on

ಹಿಂದೂ ವಿವಾಹ ಕಾಯಿದೆ- 1955ರ ಅಡಿಯಲ್ಲಿ ಸಪ್ತಪದಿ ತುಳಿಯುವುದು ಕಾನೂನುಬದ್ಧ ವಿವಾಹಕ್ಕೆ ಅತ್ಯಗತ್ಯವಾದ ಅಂಶ ಎಂದು ಅಲಾಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಸಪ್ತಪದಿ ಎಂಬುದು ಹಿಂದೂ ವಿವಾಹ ಸಮಾರಂಭದಲ್ಲಿ ವಧು- ವರರು ಕೂಡಿ ಪವಿತ್ರ ಅಗ್ನಿಯ ಸುತ್ತ ಏಳು ಹೆಜ್ಜೆಗಳನ್ನು ಇಡುವ ಆಚರಣೆಯಾಗಿದೆ. ಮಹಿಳೆಯೊಬ್ಬರು ಎರಡನೇ ವಿವಾಹವಾಗಿದ್ದಾರೆಂದು ಆರೋಪಿಸಿ ಐಪಿಸಿ ಸೆಕ್ಷನ್‌ 494ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವ ವೇಳೆ ನ್ಯಾ. ಸಂಜಯ್‌ ಕುಮಾರ್‌ ಸಿಂಗ್‌ ಅವರು ಹಿಂದೂ ವಿವಾಹವು ಸಿಂಧುವಾಗಲು ಸಪ್ತಪದಿಯ ಅಗತ್ಯತೆ ಬಗ್ಗೆ ವಿವರಿಸಿದರು.

“ಮದುವೆ ವಿವಾದಕ್ಕೀಡಾಗಿದ್ದಾಗ, ಮದುವೆ ನಡೆದಿದೆ ಎನ್ನುವ ಅಂಶವೊಂದೇ ಕಾನೂನುಬದ್ಧ ವಿವಾಹವನ್ನು ನಿರೂಪಿಸಲು ಅಗತ್ಯವಾದ ವಿಧಿ ಮತ್ತು ಆಚರಣೆಗಳನ್ನು ನಡೆಸಲಾಗಿದೆ ಎಂದು ಊಹಿಸಲು ಕಾರಣವಾಗದು. ಈ ನಿಟ್ಟಿನಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವಾಗ ದೂರುದಾರರು ಆರೋಪಿಸಿರುವಂತೆ ಸಂಬಂಧಿತ ಪಕ್ಷಕಾರರ ನಡುವೆ ಮದುವೆಯು 'ಸಪ್ತಪದಿ ಆಚರಣೆ' ಮೂಲಕ ಕಾನೂನುಬದ್ಧಗೊಂಡಿದೆ ಎಂದು ಹೇಳುವುದು ಕಷ್ಟವಾಗುತ್ತದೆ” ಎಂದು ನ್ಯಾಯಾಲಯ ನುಡಿದಿದೆ.

2017ರಲ್ಲಿ ಮದುವೆಯಾಗಿದ್ದ ದಂಪತಿಯ ದಾಂಪತ್ಯದಲ್ಲಿ ಅನತಿ ಕಾಲದಲ್ಲೇ ಬಿರುಕು ಮೂಡಿತ್ತು. ಗಂಡ ಮತ್ತು ಆತನ ಮನೆಯವರ ವಿರುದ್ಧ ಹೆಂಡತಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಮುಂದೆ ಕೆಲ ವರ್ಷದ ನಂತರ ತನಗೆ ವಿಚ್ಛೇದನ ನೀಡುವುದಕ್ಕೂ ಮೊದಲೇ ಆಕೆ ಮತ್ತೊಬ್ಬರೊಂದಿಗೆ ವಿವಾಹವಾಗಿದ್ದಾರೆ ಎಂದು ಪತಿ ಪ್ರತಿದೂರು ನೀಡಿದ್ದರು.  ತನ್ನ ಪತಿಯ ಆರೋಪಗಳು ನಿರಾಧಾರ ಎಂದು ಅರ್ಜಿದಾರೆ ಪ್ರತಿಪಾದಿಸಿದ್ದರು. ಆದರೆ ಆಕೆ ಮದುವೆಯಾಗಿರುವುದಕ್ಕೆ ಪುರಾವೆಗಳಿವೆ ಎಂಬುದು ಪತಿಯ ವಾದವಾಗಿತ್ತು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಆಕೆಯ ಎರಡನೇ ಮದುವೆ ಸಮಾರಂಭ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ನುಡಿದಿದೆ. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7ರಲ್ಲಿ ಕಾನೂನುಬದ್ಧ ಹಿಂದೂ ವಿವಾಹವನ್ನು ಸಾಬೀತುಪಡಿಸಲು ಅಗತ್ಯವಿರುವ ಆಚರಣೆಗಳು ನಡೆದಿಲ್ಲ. ಹಿಂದೂ ಕಾನೂನಿನ ಅಡಿಯಲ್ಲಿ ಸಪ್ತಪದಿ ಆಚರಣೆ ಕಾನೂನುಬದ್ಧ ವಿವಾಹದ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಅದು ನಡೆದಿದೆ ಎಂದು ಹೇಳುವ ಪುರಾವೆಗಳ ಕೊರತೆ ಇದೆ ಎಂದು ಅದು ವಿವರಿಸಿದೆ.

ಗಂಡ ನೀಡಿರುವ ದೂರು ದುರುದ್ದೇಶಪೂರ್ವಕವಲ್ಲದೆ ಬೇರೇನೂ ಅಲ್ಲ ಎಂಬುದನ್ನು ಕಂಡುಕೊಂಡ ನ್ಯಾಯಾಲಯ ಅರ್ಜಿದಾರೆ ವಿರುದ್ಧ ಆತ ದಾಖಲಿಸಿದ್ದ ಕ್ರಿಮಿನಲ್‌ ಮೊಕದ್ದಮೆಗಳನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com