ಸರಪಂಚರ ಪ್ರತಿಭಟನೆ: ರಸ್ತೆ ತೆರವುಗೊಳಿಸುವಂತೆ ಪೊಲೀಸರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ

ಸಂಘಟನೆಗಳು, ಸಂಘಗಳು ಅಥವಾ ಜನ ಸಮುದಾಯದ ಪ್ರತಿಭಟನೆಗೆ ಅನುಮತಿ ಇದ್ದರೂ ಅವರು ನಿಗದಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇದೆ ಎಂದಿದೆ ನ್ಯಾಯಾಲಯ.
Punjab and Haryana High Court
Punjab and Haryana High Court

ಪ್ರತಿಭಟಿಸುವ ಹಕ್ಕು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಪರವಾನಗಿಯನ್ನು ಪ್ರತಿಭಟನಾಕಾರರಿಗೆ ನೀಡುವುದಿಲ್ಲ ಎಂದು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಇ- ಟೆಂಡರ್‌ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಯೋಜನೆ ಜಾರಿಗೊಳಿಸುವುದನ್ನು ವಿರೋಧಿಸಿ ಹರ್ಯಾಣದಲ್ಲಿ ಬಿಜೆಪಿ- ಜೆಜೆಪಿ ಸರ್ಕಾರದ ವಿರುದ್ಧ ಸರಪಂಚ್‌ಗಳು (ಗ್ರಾಮ ಪ್ರಧಾನರು) ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ರಸ್ತೆಗಳಲ್ಲಿ ಹಾಕಲಾಗಿದ್ದ ದಿಗ್ಬಂಧನಗಳನ್ನು ತೆರವುಗೊಳಿಸುವಂತೆ ಈ ಮೂಲಕ ನ್ಯಾಯಾಲಯ ಆದೇಶಿಸಿದೆ.

ಪಂಚಕುಲದಲ್ಲಿ ಪ್ರತಿಭಟನಾ ನಿರತ ಸರಪಂಚರು ಮತ್ತು ಹರ್ಯಾಣ ಸರ್ಕಾರದ ನಡುವಿನ ಬಿಕ್ಕಟ್ಟಿನ ಕುರಿತು ಶನಿವಾರ ನಡೆದ ನ್ಯಾಯಾಲಯದ ವಿಶೇಷ ಕಲಾಪದ ವೇಳೆ ಈ ಅವಲೋಕನ ಮಾಡಲಾಯಿತು. 

ಪಂಚಕುಲ ಮತ್ತು ಚಂಡೀಗಢ ಸಂಪರ್ಕಿಸುವ ರಸ್ತೆಯನ್ನು ತೆರವುಗೊಳಿಸುವಂತೆ ನ್ಯಾಯಮೂರ್ತಿಗಳಾದ ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ವಿಕ್ರಮ್ ಅಗರ್ವಾಲ್ ಅವರಿದ್ದ ವಿಭಾಗೀಯ ಪೀಠ, ಹರ್ಯಾಣ ಪೊಲೀಸರಿಗೆ ಆದೇಶಿಸಿತು. ಮಾರ್ಚ್‌ 2ರಿಂದ ಸರಪಂಚರು ಇಡೀ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ನಾಗರಿಕರಿಗೆ ಅದರಲ್ಲಿಯೂ ಎರಡೂ ನಗರಗಳ ನಡುವೆ ಪ್ರಯಾಣಿಸುವವರಿಗೆ ಅನಾನುಕೂಲ ಉಂಟಾಗಿತ್ತು.

“ಸಂಘಟನೆಗಳು, ಸಂಘಗಳು ಅಥವಾ ಜನ ಸಮುದಾಯದ ಪ್ರತಿಭಟನೆಗೆ ಅನುಮತಿ ಇದ್ದರೂ ಅವರು ನಿಗದಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇದೆ. ಆದರೆ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಅನಾನುಕೂಲತೆ ಉಂಟುಮಾಡುವುದಷ್ಟೇ ಅಲ್ಲದೆ ಅಕ್ಷರಶಃ ಅವರನ್ನು ಶೋಷಿಸಿ ಆ ಮೂಲಕ ತಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಬಲವಂತಪಡಿಸಲು ಇದು ಪರವಾನಗಿ ನೀಡುವುದಿಲ್ಲ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

"ಸಾಮಾನ್ಯ ಜನರಿಗೆ ಅಪಾಯ ಮತ್ತು ಅನಾನುಕೂಲತೆಯನ್ನು ಉಂಟುಮಾಡದ ಮಟ್ಟಿಗೆ ಪ್ರತಿಭಟನೆಗೆ ಔದಾರ್ಯ ತೊರಬಹುದಾದರೂ ಯಾವುದೇ ಸಾರ್ವಜನಿಕ ರಸ್ತೆ ನಿರ್ಬಂಧಿಸಲು ಸಂಘ ಸಂಸ್ಥೆಗಳು ದೊಡ್ಡಮಟ್ಟದಲ್ಲಿ ಸೇರಿದಾಗ ಅದಕ್ಕೆ ಅವಕಾಶ ನೀಡದಂತೆ ಆಡಳಿತ ವ್ಯವಸ್ಥೆ ತಕ್ಷಣದ ಕ್ರಮ ಕೈಗೊಳ್ಳಬೇಕು. ನಾವು ಗಮನಿಸಿದಂತೆ ಪ್ರಸ್ತುತ ಪ್ರಕರಣದಲ್ಲಿ ಅಧಿಕಾರಿಗಳು ಜನರಿಗೆ ಎದುರಿಸುತ್ತಿರುವ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ಗ್ರಹಿಸಲು ವಿಫಲರಾಗಿದ್ದಾರೆ “ ಎಂದು ನ್ಯಾಯಾಲಯ ಹೇಳಿತು.

Related Stories

No stories found.
Kannada Bar & Bench
kannada.barandbench.com