ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಮತ್ತು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಝೀಲ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ಗೋಯೆಂಕಾ ಅವರು ಯಾವುದೇ ಲಿಸ್ಟೆಡ್ ಕಂಪೆನಿಗಳು ಅಥವಾ ಅವುಗಳ ಅಂಗಸಂಸ್ಥೆಗಳಲ್ಲಿ ನಿರ್ದೇಶಕ ಹುದ್ದೆ ಸ್ವೀಕರಿಸದಂತೆ ನೀಡಿದ್ದ ಆದೇಶ ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಷೇರು ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ಆದೇಶ ಕಾಯ್ದಿರಿಸಿದೆ.
ಎರಡೂ ಕಡೆಯ ವಕೀಲರ ವಾದಗಳನ್ನು ಎರಡು ದಿನಗಳ ಕಾಲ ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿ ತರುಣ್ ಅಗರ್ವಾಲಾ ಮತ್ತು ಸಭಾಧ್ಯಕ್ಷೆ ಮೀರಾ ಸ್ವರೂಪ್ ಅವರನ್ನೊಳಗೊಂಡ ಎಸ್‌ಎಟಿ ಪೀಠ ಆದೇಶ ಕಾಯ್ದಿರಿಸಿತು.
ಯಾವುದೇ ಲಿಸ್ಟೆಡ್ ಕಂಪನಿ ಅಥವಾ ಅದರ ಅಂಗಸಂಸ್ಥೆಗಳಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಹುದ್ದೆಗಳನ್ನು (ಕೆಎಂಪಿ) ಸ್ವೀಕರಿಸದಂತೆ ನಿರ್ಬಂಧಿಸಿದ್ದ ಸೆಬಿ ಮಧ್ಯಂತರ ಆದೇಶವನ್ನು ಗೋಯೆಂಕಾ ಮತ್ತು ಸುಭಾಷ್ ಚಂದ್ರ ಪ್ರಶ್ನಿಸಿದ್ದರು.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಸೆಬಿ ಆದೇಶ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಿದೆ ಎಂದು ಕಾನೂನು ಸಂಸ್ಥೆ ʼಎಕನಾಮಿಕ್ ಲಾಸ್ ಪ್ರಾಕ್ಟೀಸ್ʼ ಮೂಲಕ ಸಲ್ಲಿಸಲಾದ ಅಜಿಯಲ್ಲಿ ದೂರಲಾಗಿದೆ. ಆದೇಶ ಜಾರಿಗೆ ತರುವ ಮುನ್ನ ಸೆಬಿ ತಮಗೆ ಯಾವುದೇ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಮೇಲ್ಮನವಿದಾರರು ದೂರಿದ್ದಾರೆ.
ಗೋಯೆಂಕಾ ಪರ ಹಿರಿಯ ವಕೀಲ ಜನಕ್ ದ್ವಾರಕಾದಾಸ್, ಸುಭಾಷ್ ಚಂದ್ರ ಪರ ವಕೀಲ ಸೋಮಶೇಖರ್ ಸುಂದರೇಶನ್ ವಾದಿಸಿದರು. ಆದರೆ ಸೆಬಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಡೇರಿಯಸ್ ಖಂಬಾಟಾ, ಆದೇಶಕ್ಕೆ ತಡೆ ನೀಡುವಂತೆ ಗೋಯೆಂಕಾ ಮತ್ತು ಸುಭಾಷ್‌ಚಂದ್ರ ಪರ ವಕೀಲರು ಮಾಡಿದ ಮನವಿಗೆ ವಿರೋಧ ವ್ಯಕ್ತಪಡಿಸಿದರು.