
ಪ್ರಕರಣದಲ್ಲಿ ಇದುವರೆಗಿನ ಪೊಲೀಸ್ ತನಿಖೆಯಿಂದ ತೃಪ್ತಿ ಹೊಂದಿರುವುದಾಗಿ ದಕ್ಷಿಣ ಕೋಲ್ಕತ್ತಾ ಕಾನೂನು ಕಾಲೇಜಿನ ಅತ್ಯಾಚಾರ ಸಂತ್ರಸ್ತೆ ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಸ್ಮಿತಾ ದಾಸ್ ಡೇ ಅವರಿದ್ದ ಪೀಠದ ಮುಂದೆ ಆಕೆಯ ಪರವಾಗಿ ಹಾಜರಾದ ವಕೀಲರು ಈ ಹೇಳಿಕೆ ನೀಡಿದರು.
"ತನಿಖೆಯ ಇಲ್ಲಿಯವರೆಗಿನ ಪ್ರಗತಿಯಿಂದ ಸಂತ್ರಸ್ತೆ ತೃಪ್ತಳಾಗಿದ್ದಾರೆ ಎಂದು ಸಂತ್ರಸ್ತೆಯ ಪರ ವಕೀಲರು ಹೇಳಿದ್ದಾರೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯ ವಿಚಾರಣೆ ವೇಳೆ ಸಂತ್ರಸ್ತೆ ಈ ವಿವರ ನೀಡಿದ್ದಾರೆ.
ಜೂನ್ 25ರಂದು ಸೌತ್ ಕಲ್ಕತ್ತಾ ಕಾನೂನು ಕಾಲೇಜಿನ ಭದ್ರತಾ ಸಿಬ್ಬಂದಿ ಕೋಣೆಯಲ್ಲಿ ಪ್ರಥಮ ವರ್ಷ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಆರೋಪ ಕೇಳಿಬಂದಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಆಕೆಯ ಹೇಳಿಕೆಗಳನ್ನು ದೃಢಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದರು. ಇಲ್ಲಿಯವರೆಗೆ, ಮನೋಜಿತ್ ಮಿಶ್ರಾ, ಪ್ರಮಿತ್ ಮುಖರ್ಜಿ, ಜೈದ್ ಅಹ್ಮದ್ ಹಾಗೂ ಒಬ್ಬ ಕಾಲೇಜು ಭದ್ರತಾ ಸಿಬ್ಬಂದಿ ಸೇರಿ ನಾಲ್ವರನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದರು.
ಮಿಶ್ರಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದರೆ, ಉಳಿದ ಇಬ್ಬರು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ವಿಡಿಯೋ ಚಿತ್ರೀಕರಿಸಿದ್ದರು ಎಂದು ಆರೋಪಿಸಲಾಗಿದೆ. ಮಿಶ್ರಾಗೆ ತೃಣಮೂಲ ಕಾಂಗ್ರೆಸ್ ಯುವ ಘಟಕದೊಂದಿಗೆ ನಂಟು ಇದೆ ಎನ್ನಲಾಗಿದೆ. ಆರೋಪಿಗಳನ್ನು ಜೂನ್ 27 ರಂದು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತ್ತು.
ಇಂದು ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಪಿಐಎಲ್‌ಗಳ ವಿಚಾರಣೆ ವೇಳೆ ನ್ಯಾಯಾಲಯ ಪ್ರಕರಣದ ಡೈರಿ ಮತ್ತು ತನಿಖೆಯ ಪ್ರಗತಿ ವಿವರಿಸುವ ಪೊಲೀಸರು ಸಿದ್ಧಪಡಿಸಿದ ಮುಚ್ಚಿದ ಲಕೋಟೆಯ ವರದಿ ಪರಿಶೀಲಿಸಿತು. ತನಿಖೆಯ ಪ್ರಗತಿಯ ನಕಲು ಪ್ರತಿಯನ್ನು ಸಂತ್ರಸ್ತೆ ಪರ ವಕೀಲರಿಗೆ ಹಸ್ತಾಂತರಿಸಬೇಕೆಂದು ನ್ಯಾಯಪೀಠ ನಿರ್ದೇಶಿಸಿತು.
ವರದಿಯಲ್ಲಿರುವ ಅಂಶಗಳನ್ನು ಯಾರಿಗೂ ಬಹಿರಂಗಪಡಿಸಬಾರದು ಎಂದು ಅದು ಇದೇ ವೇಳೆ ವಕೀಲರಿಗೆ ಎಚ್ಚರಿಕೆ ನೀಡಿತು. ನಾಲ್ಕು ವಾರಗಳಲ್ಲಿ ಮತ್ತೊಂದು ಪ್ರಗತಿ ವರದಿ ಸಲ್ಲಿಸುವಂತೆ ಪೊಲೀಸರಗೆ ಆದೇಶಿಸಲಾಗಿದೆ.
ಈ ಮಧ್ಯೆ, ವಿಜಯ್ ಕುಮಾರ್ ಸಿಂಘಾಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಪೀಠ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿತು. ಪ್ರಕರಣದಲ್ಲಿ ಸಿಬಿಐ ತನಿಖೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರೂ, ಅರ್ಜಿದಾರರ ಪರ ವಕೀಲರು ಆರೋಪಿಗಳ ಮಾನವ ಹಕ್ಕುಗಳ ವಿಚಾರ ಎತ್ತಲು ಪ್ರಾರಂಭಿಸಿದರು ಎಂದು ಆಕ್ಷೇಪಿಸಿತು.
"ಭಾಗಶಃ ತನಿಖೆ ನಡೆದಿದೆ ಎಂದು ಆರೋಪಿಸಿರುವ ಅರ್ಜಿದಾರರು ಆರೋಪಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಅಥವಾ ಅವರ ಮಾನವ ಹಕ್ಕು ಉಲ್ಲಂಘಿಸಲಾಗುತ್ತಿದೆ ಎಂದಿರುವ ಅರ್ಜಿದಾರರ ಪ್ರಾಮಾಣಿಕತೆಯ ಬಗ್ಗೆ ನಮಗೆ ಆತಂಕವಿದ್ದು ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ತಿಳಿಸಿತು.