ದೆಹಲಿಯ ಏಮ್ಸ್‌ನಲ್ಲಿ ಸತೀಶ್‌ ಸೈಲ್‌ಗೆ ವೈದ್ಯಕೀಯ ಆರೋಗ್ಯ ತಪಾಸಣೆ; ಚರ್ಚಿಸಿ ಸಮಯ, ದಿನಾಂಕ ನಿರ್ಧರಿಸಲು ನಿರ್ದೇಶನ

ಏಮ್ಸ್‌ನ ಜಠರ ಕರುಳಿನ ತಜ್ಞರು ಡಿ.19ರ ಮಧ್ಯಾಹ್ನ 12.30 ಅಥವಾ ಡಿ.20ರ ಬೆಳಿಗ್ಗೆ 8.30ರ ವೇಳೆಗೆ ಏಮ್ಸ್‌ ನಿಯಂತ್ರಣ ಕೊಠಡಿಗೆ ಸತೀಶ್‌ ಸೈಲ್‌ ಕರೆತರುವಂತೆ ಸೂಚಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದ ಎಎಸ್‌ಜಿ ಅರವಿಂದ್‌ ಕಾಮತ್.‌
Congress MLA Satish Sail & Karnataka HC
Congress MLA Satish Sail & Karnataka HC
Published on

ಅಕ್ರಮ ಅದಿರು ಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚರ್ಚಿಸಿ, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಯಾವ ಸಮಯಕ್ಕೆ ಮತ್ತು ಎಂದು ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ವೈದ್ಯಕೀಯ ಜಾಮೀನು ಕೋರಿ ಸತೀಶ್‌ ಸೈಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಬೆಂಗಳೂರಿನ ಇ ಡಿಯ ಸಹಾಯಕ ನಿರ್ದೇಶಕರಿಗೆ ಏಮ್ಸ್‌ನ ಮೇಲ್ವಿಚಾರಕರು ಪತ್ರ ಬರೆದಿದ್ದು, ಜಠರ ಕರುಳಿನ ತಜ್ಞರು ಡಿಸೆಂಬರ್‌ 19ರ ಮಧ್ಯಾಹ್ನ 12.30 ಅಥವಾ ಡಿಸೆಂಬರ್‌ 20ರ ಬೆಳಿಗ್ಗೆ 8.30ರ ವೇಳೆಗೆ ಏಮ್ಸ್‌ ನಿಯಂತ್ರಣ ಕೊಠಡಿಗೆ ಸತೀಶ್‌ ಸೈಲ್‌ ಕರೆತರುವಂತೆ ಸೂಚಿಸಿದ್ದಾರೆ. ಇದರ ಜೊತೆಗೆ ಈಗಾಗಲೇ ನಡೆಸಿರುವ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆಗೆ ತರಬೇಕು ಎಂದಿದ್ದಾರೆ” ಎಂದರು.

ಆಗ ಸೈಲ್‌ ಪರ ವಕೀಲರು “ದೆಹಲಿಯಲ್ಲಿ ವಾಯುಗುಣಮಟ್ಟ ಸರಿಯಿಲ್ಲ. ಇದರಿಂದ ವಿಮಾನಗಳ ಹಾರಾಟ ಏರುಪೇರಾಗುತ್ತಿವೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಕಾಲಾವಕಾಶ ನೀಡಬೇಕು” ಎಂದರು.

ಇದಕ್ಕೆ ಪೀಠ “ಇದು ನಮಗೆ ಸಂಬಂಧಿಸಿಲ್ಲ. ಜಾರಿ ನಿರ್ದೇಶನಾಲಯ ಮತ್ತು ಸತೀಶ್‌ ಸೈಲ್‌ ಒಟ್ಟಾಗಿ ಕುಳಿತು ವೈದ್ಯರ ಅನುಕೂಲ ನೋಡಿಕೊಂಡು ತೀರ್ಮಾನಿಸಬಹುದು” ಎಂದಿತು.

ಅಂತಿಮವಾಗಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೆಮೊ ದಾಖಲಿಸಿಕೊಂಡ ನ್ಯಾಯಾಲಯವು “ದೆಹಲಿಯ ಏಮ್ಸ್‌ಗೆ ಯಾವತ್ತು ಮತ್ತು ಎಷ್ಟು ಗಂಟೆಗೆ ಹೋಗಬೇಕು ಎಂಬುದನ್ನು ನಿರ್ಧರಿಸಲು ಅರ್ಜಿ ವಿಚಾರಣೆ ಮುಂದೂಡಲಾಗದು. ದಿನಾಂಕದ ಕುರಿತು ಜಾರಿ ನಿರ್ದೇಶನಾಲಯದ ಜೊತೆ ಕುಳಿತು ಸೈಲ್‌ ಅವರು ತೀರ್ಮಾನಿಸಬಹುದು” ಎಂದು ಹೇಳಿ, ಮಧ್ಯಂತರ ಜಾಮೀನು ನೀಡಿರುವ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.

Kannada Bar & Bench
kannada.barandbench.com