ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ: ವಿಶೇಷ ವಿಚಾರಣೆ ವೇಳೆ ಗುಜರಾತ್ ಹೈಕೋರ್ಟ್ ಧೋರಣೆ ಖಂಡಿಸಿದ ಸುಪ್ರೀಂ ಕೋರ್ಟ್‌

“ಆಗಸ್ಟ್ 10 ರಂದು ವರದಿ ಬರಲಿದ್ದು 13 ದಿನಗಳ ನಂತರ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಗೆ ಹೇಳಬಲ್ಲದು? ಎಷ್ಟೊಂದು ಅಮೂಲ್ಯ ಸಮಯ ವ್ಯರ್ಥವಾಯಿತು” ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ: ವಿಶೇಷ ವಿಚಾರಣೆ ವೇಳೆ ಗುಜರಾತ್ ಹೈಕೋರ್ಟ್ ಧೋರಣೆ ಖಂಡಿಸಿದ ಸುಪ್ರೀಂ ಕೋರ್ಟ್‌

ಅತ್ಯಾಚಾರ ಸಂತ್ರಸ್ತೆ ಹಾಗೂ 26 ವಾರಗಳ ಗರ್ಭಿಣಿಯೊಬ್ಬರು ಗರ್ಭಪಾತಕ್ಕೆ ಅನುಮತಿಸುವಂತೆ ಕೋರಿದ್ದ ಪ್ರಕರಣವನ್ನು ಗುಜರಾತ್‌ ಹೈಕೋರ್ಟ್‌ ವಿಚಾರಣೆ ನಡೆಸಿದ ರೀತಿಗೆ ಶನಿವಾರ ನಡೆದ ವಿಶೇಷ ನ್ಯಾಯಾಲಯ ಕಲಾಪದ ವೇಳೆ ಸುಪ್ರೀಂ ಕೋರ್ಟ್‌ ಸಿಡಿಮಿಡಿಗೊಂಡಿದೆ [ಗುರುತು ಮುಚ್ಚಿಡಲಾದ ಮಹಿಳೆ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಹೈಕೋರ್ಟ್‌ ಈ ಮೊದಲು ಪ್ರಕರಣ ಮುಂದೂಡಿದ್ದರಿಂದ ಸಾಕಷ್ಟು ಸಮಯ ಕಳೆದುಹೋಗಿದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಬೇಸರ ವ್ಯಕ್ತಪಡಿಸಿತು.

“ಪ್ರಕರಣದ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದ್ದು ಏಕೆ? ಆಗಸ್ಟ್ 10ರಂದು ವರದಿ ಬರಲಿದ್ದು 13 ದಿನಗಳ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಗೆ ಹೇಳಬಲ್ಲದು? ಎಷ್ಟೊಂದು ಅಮೂಲ್ಯ ಸಮಯ ವ್ಯರ್ಥವಾಯಿತು… ಇಂತಹ ಪ್ರಕರಣಗಳಲ್ಲಿ ತುರ್ತಾಗಿ ವಿಚಾರಣೆ ನಡೆಸುವ ಅರಿವಿರಬೇಕು. ಇಂತಹ ಪ್ರಕರಣಗಳಲ್ಲಿ  ಅಸಡ್ಡೆ ಸಲ್ಲದು'' ಎಂದು ನ್ಯಾ. ನಾಗರತ್ನ ಟೀಕಿಸಿದರು. ಈ ವಿಚಾರವನ್ನು ಆದೇಶದಲ್ಲಿ ಕೂಡ ಉಲ್ಲೇಖಿಸಲಾಗಿದೆ.

"ವಿಚಿತ್ರ ಎಂದರೆ 12 ದಿನಗಳ ನಂತರ (ವೈದ್ಯಕೀಯ ವರದಿ ಬಂದ ನಂತರ) ಆಗಸ್ಟ್ 23ಕ್ಕೆ ಹೈಕೋರ್ಟ್ ಪ್ರಕರಣವನ್ನು ಪಟ್ಟಿ ಮಾಡಿದೆ. ಈ ಹಂತದಲ್ಲಿ ಪ್ರತಿದಿನದ ವಿಳಂಬವೂ ಸಹ ಅತ್ಯಂತ ನಿರ್ಣಾಯಕ ಮತ್ತು ಗಂಭೀರ ಸ್ವರೂಪದ್ದಾಗಿರಲಿದೆ ಎನ್ನುವ ಅಂಶವನ್ನು ನ್ಯಾಯಾಲಯಗ ಕಡೆಗಣಿಸಿದೆ. ಅರ್ಜಿದಾರೆ ಗರ್ಭಪಾತ ಕೋರಿ ನ್ಯಾಯಾಲಯದ ಮೆಟ್ಟಿಲೇರಿದಾಗ ಅವರು 26 ವಾರಗಳ ಗರ್ಭಿಣಿಯಾಗಿದ್ದರು. ಆದ್ದರಿಂದ ಆಗಸ್ಟ್‌ 8ರಿಂದ ಮುಂದಿನ ವಿಚಾರಣೆ ನಡೆಯುವ ದಿನದವರೆಗಿನ ಮಧ್ಯದ ಅಮೂಲ್ಯ ಸಮಯ ಕಳೆದುಹೋದಂತಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

Also Read
ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕಿದೆ: ಉತ್ತರಾಖಂಡ ಹೈಕೋರ್ಟ್ [ಚುಟುಕು]

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರದ ಪ್ರತಿಕ್ರಿಯೆ ಕೇಳಿರುವ ಸುಪ್ರೀಂ ಕೋರ್ಟ್‌ ಎರಡು ದಿನಗಳ ಬಳಿಕ ಅಂದರೆ ಸೋಮವಾರ ಪ್ರಕರಣದ ವಿಚಾರಣೆ ನಡೆಸಲಿದೆ. ಇದಕ್ಕೂ ಮುನ್ನ ಭಾನುವಾರ ಸಂಜೆ 6 ಗಂಟೆಯೊಳಗೆ ಅತ್ಯಾಚಾರ ಸಂತ್ರಸ್ತೆಯ ನೂತನ ವೈದ್ಯಕೀಯ ಪರೀಕ್ಷೆ ನಡೆಸಿ ಅದರ ವರದಿಯನ್ನು ತನಗೆ ಸಲ್ಲಿಸುವಂತೆ ಅದು ಆದೇಶಿಸಿದೆ.

ಅತ್ಯಾಚಾರ ಸಂತ್ರಸ್ತ ಮಹಿಳೆಯ 26 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಬೇಕೆಂಬ ಮನವಿ ತಿರಸ್ಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com