ತಮ್ಮ ಜಾಮೀನು ಮನವಿಯ ವಿಚಾರಣೆಯನ್ನು ಒಬ್ಬರು ನ್ಯಾಯಾಧೀಶರಿಂದ ಮತ್ತೊಬ್ಬರು ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲು ಕೋರಿದ್ದ ಜಾರಿ ನಿರ್ದೇಶನಾಲಯದ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯದ ನಡೆ ಪ್ರಶ್ನಿಸಿ ದೆಹಲಿಯ ಸಚಿವ ಸತ್ಯೇಂದರ್ ಜೈನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಮುಂದೆ ತುರ್ತಾಗಿ ಅರ್ಜಿ ಪಟ್ಟಿ ಮಾಡುವಂತೆ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರು ಕೋರಿದರು.
ಇಂದು ಮಧ್ಯಾಹ್ನ ವಿಶೇಷ ನ್ಯಾಯಾಧೀಶರ ಮುಂದೆ 2 ಗಂಟೆಯಿಂದ ಜಾಮೀನು ಅರ್ಜಿಯ ವಿಚಾರಣೆ ಆರಂಭವಾಗಲಿದ್ದು, ಒಂದು ವಾರದಲ್ಲಿ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ ಎಂದು ಮೆಹ್ರಾ ಅವರು ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತಂದರು. ಇದನ್ನು ಆಲಿಸಿದ ಹೈಕೋರ್ಟ್, ಸೋಮವಾರಕ್ಕೆ ಅರ್ಜಿ ಪಟ್ಟಿ ಮಾಡುವಂತೆ ಸೂಚಿಸಿತು.
ಇಂದು ಬೆಳಗ್ಗೆ ಪ್ರಕರಣದ ವರ್ಗಾವಣೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ರೋಸ್ ಅವೆನ್ಯೂ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿನಯ್ ಕುಮಾರ್ ಅವರು ಪುರಸ್ಕರಿಸಿದ್ದರು. ಹೀಗಾಗಿ, ವಿಶೇಷ ನ್ಯಾಯಾಧೀಶರಾದ ವಿಕಾಸ್ ಧುಲ್ ಅವರು ಸತ್ಯೇಂದರ್ ಜೈನ್ ಅವರ ಜಾಮೀನು ಮನವಿಯ ವಿಚಾರಣೆ ನಡೆಸಲಿದ್ದಾರೆ.
ಇದಕ್ಕೂ ಮುನ್ನ, ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ಜೈನ್ ಜಾಮೀನು ಮನವಿಗೆ ಸಂಬಂಧಿಸಿದಂತೆ ವಾದ ಆಲಿಸಿದ್ದು, ಅದು ಅಂತಿಮ ಹಂತದಲ್ಲಿತ್ತು. ನ್ಯಾಯಾಧೀಶರು ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಪ್ರಕರಣದ ವಿಚಾರಣೆಯನ್ನು ಮತ್ತೊಬ್ಬರು ನ್ಯಾಯಾಧೀಶರಿಗೆ ವರ್ಗಾಯಿಸಬೇಕು ಎಂದು ಕೋರಿತ್ತು. ಇದಕ್ಕೆ ರೋಸ್ ಅವೆನ್ಯೂ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಅನುಮತಿಸಿದ್ದರು. ಇದನ್ನು ಪ್ರಶ್ನಿಸಿ ಜೈನ್ ಹೈಕೋರ್ಟ್ ಮೆಟ್ಟಿಲೇರಿದ್ದರು.