
ವಿನಾಯಕ ಸಾವರ್ಕರ್ ಮಾನನಷ್ಟ ಪ್ರಕರಣದ ದೂರುದಾರ ಸಾತ್ಯಕಿ ಸಾವರ್ಕರ್ ಅವರು ತಮ್ಮ ತಾಯಿಯ ವಂಶಾವಳಿಯ ಬಗ್ಗೆ - ನಿರ್ದಿಷ್ಟವಾಗಿ ಹೇಳುವುದಾದರೆ, ಅವರು ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆಯ ಮೊಮ್ಮಗ ಎಂಬ ಮಹತ್ವದ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ದೂರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪುಣೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಆರೋಪಗಳಿಗೆ ಸಾತ್ಯಕಿ ಅವರು ಪ್ರತಿಕ್ರಿಯಿಸುವಂತೆ ಬುಧವಾರ ಸೂಚಿಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಮೋಲ್ ಶ್ರೀರಾಮ್ ಶಿಂಧೆ ಅವರು ಪ್ರಕರಣವನ್ನು ಜೂನ್ 12ಕ್ಕೆ ಮುಂದೂಡಿದರು.
ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ನಡೆದ ಭಾಷಣದ ಸಮಯದಲ್ಲಿ ರಾಹುಲ್ ಅವರು ವಿನಾಯಕ ಸಾವರ್ಕರ್ ಬಗ್ಗೆ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ದೂರು ಸಲ್ಲಿಸಿದ್ದರು.
ಸಾವರ್ಕರ್ ತಮ್ಮ ಬರಹವೊಂದರಲ್ಲಿ ತಾನು ಮತ್ತು ತನ್ನ ಗುಂಪು ಒಮ್ಮೆ ಮುಸ್ಲಿಮರನ್ನು ಥಳಿಸಿದ್ದಾಗಿಯೂ ಅದರಿಂದ ತಮಗೆ ಆನಂದ ದೊರೆತದ್ದಾಗಿಯೂ ಬರೆದುಕೊಂಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದ ವೇಳೆ ಪ್ರಸ್ತಾಪಿಸಿದ್ದರು. ಈ ಹೇಳಿಕೆಗಳನ್ನು ನಿರಾಕರಿಸಿದ್ದ ಸಾತ್ಯಕಿ ಅವರು ರಾಹುಲ್ ಅವರ ಟೀಕೆಗಳು ಮಾನಹಾನಿಕರ ಎಂದಿದ್ದರು.
ರಾಹುಲ್ ಗಾಂಧಿ ಅವರು ಮಾಡಿರುವ ಕ್ರಿಮಿನಲ್ ಮಾನಹಾನಿಗಾಗಿ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಗರಿಷ್ಠ ಶಿಕ್ಷೆ ಮತ್ತು ಸಿಆರ್‌ಪಿಸಿ ಸೆಕ್ಷನ್ 357ರ ಅಡಿ ಅತ್ಯಧಿಕ ಪರಿಹಾರ ನೀಡುವಂತೆ ಸಾತ್ಯಕಿ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಸಾತ್ಯಕಿ ತನ್ನ ತಾಯಿಯ ವಂಶವೃಕ್ಷವನ್ನು ಬಹಿರಂಗಪಡಿಸುವುದನ್ನು " ಉದ್ದೇಶಪೂರ್ವಕವಾಗಿ, ವ್ಯವಸ್ಥಿತವಾಗಿ, ಬಹಳ ಅದ್ಭುತವಾಗಿ ತಪ್ಪಿಸಿದ್ದಾರೆ" ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಾತ್ಯಕಿ ಅವರು ಮಾಹಿತಿ ಮುಚ್ಚಿಟ್ಟಿರುವುದು ಗೋಡ್ಸೆ ಕುಟುಂಬದೊಂದಿಗೆ ತಮಗೆ ನೇರ ಕೌಟುಂಬಿಕ ಸಂಬಂಧ ಇರುವುದನ್ನು ಸಾಬೀತುಪಡಿಸುತ್ತದೆ. ಮಾನನಷ್ಟ ಪ್ರಕರಣ ನಿರ್ಧರಿಸುವಲ್ಲಿ ಈ ಅಂಶ ಪ್ರಸ್ತುತವಾಗಿದೆ ಎಂದು ಎಂದು ರಾಹುಲ್ ಹೇಳಿದರು.
ದೂರುದಾರರ ತಾಯಿ ಗೋಪಾಲ್ ಗೋಡ್ಸೆ ಅವರ ಮಗಳು ಮತ್ತು ನಾಥುರಾಮ್ ಗೋಡ್ಸೆ ಅವರ ಸೊಸೆ ಮಾತ್ರವಲ್ಲದೆ ಹಿಂದುತ್ವ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಸಕ್ರಿಯ ರಾಜಕೀಯ ವ್ಯಕ್ತಿ ಕೂಡ ಎಂದು ರಾಹುಲ್ ಹೇಳಿದ್ದಾರೆ.
"ತಮಗಿರುವ ಮಾಹಿತಿಯ ಪ್ರಕಾರ, ದೂರುದಾರರ (ಸಾತ್ಯಕಿ ಸಾವರ್ಕರ್) ತಾಯಿಯಾದ ದಿವಂಗತ ಶ್ರೀಮತಿ ಹಿಮಾನಿ ಅಶೋಕ್ ಸಾವರ್ಕರ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು 30/01/1948 ರಂದು ಕೊಂದು, ಆ ಕೃತ್ಯಕ್ಕಾಗಿ ತನ್ನ ಸಹಚರ ನಾರಾಯಣ್ ಆಪ್ಟೆ ಅವರೊಂದಿಗೆ 15/11/1949 ರಂದು ಗಲ್ಲಿಗೇರಿಸಲ್ಪಟ್ಟ ನಾಥುರಾಮ್ ವಿನಾಯಕ್ ಗೋಡ್ಸೆ ಅವರ ಕಿರಿಯ ಸಹೋದರ ಗೋಪಾಲ್ ವಿನಾಯಕ್ ಗೋಡ್ಸೆ ಅವರ ಮಗಳು" ಎಂದು ಗಾಂಧಿ ಹೇಳಿದ್ದಾರೆ.
"ಪ್ರಸಕ್ತ ಪ್ರಕರಣದಲ್ಲಿ ದೂರುದಾರರ 'ತಾಯಿಯ ಕಡೆಯ' ಕುಟುಂಬ ವೃಕ್ಷವು ಸಹ ಬಹುಮುಖ್ಯವಾಗಿದ್ದು ದೂರುದಾರರ ಅಜ್ಜ ಗೋಪಾಲ್ ವಿನಾಯಕ್ ಗೋಡ್ಸೆ ಮತ್ತು ನಾಥುರಾಮ್ ವಿನಾಯಕ್ ಗೋಡ್ಸೆ ನೈಜ ಸಹೋದರರು. ಇವರ ಕುಟುಂಬವು ಮಹಾತ್ಮ ಗಾಂಧಿಯವರ ಹತ್ಯೆಯ ಮತ್ತೊಬ್ಬ ಪ್ರಮುಖ ಆರೋಪಿಯಾದ ವಿನಾಯಕ ದಾಮೋದರ್ ಸಾವರ್ಕರ್ ಕುಟುಂಬದೊಂದಿಗೆ ಇತಿಹಾಸ, ರಕ್ತಸಂಬಂಧವನ್ನು ಹೊಂದಿದೆ" ಎಂದು ಅವರು ವಾದಿಸಿದ್ದಾರೆ.
ರಾಹುಲ್ ಪರವಾಗಿ ವಕೀಲ ಮಿಲಿಂದ್ ಪವಾರ್ ವಾದ ಮಂಡಿಸಿದರು. ಸಾತ್ಯಕಿ ಸಾವರ್ಕರ್ ಅವರನ್ನು ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಪ್ರತಿನಿಧಿಸಿದ್ದರು.