ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರಿಗೆ ತಲಾ 3 ವರ್ಷ ಜೈಲು; ₹21.5 ಲಕ್ಷ ದಂಡ ವಿಧಿಸಿದ ವಿಶೇಷ ನ್ಯಾಯಾಲಯ

ರೆಡ್ಡಿ ಎಂಟಿವಿ ₹7.75 ಲಕ್ಷ, ಕೃಷ್ಣಯ್ಯ ಶೆಟ್ಟಿ ₹5.25 ಲಕ್ಷ, ಮುನಿರಾಜು ಮತ್ತು ಶ್ರೀನಿವಾಸ್‌ ತಲಾ ₹4.25 ಲಕ್ಷ ದಂಡ ಪಾವತಿಸಬೇಕಿದ್ದು, ಇದನ್ನು 10 ದಿನಗಳಲ್ಲಿ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ತಿಂಗಳ ಅವಧಿಗೆ ಶಿಕ್ಷೆ ಅಮಾನತುಗೊಳಿಸಿದೆ.
former minister S N Krishnaiah Setty and Bengaluru city civil court
former minister S N Krishnaiah Setty and Bengaluru city civil court
Published on

ನಕಲಿ ವೇತನ ಸರ್ಟಿಫಿಕೇಟ್‌ಗಳನ್ನು ಸಲ್ಲಿಸಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ₹7.17 ಕೋಟಿ ಹಣ ದುರ್ಬಳಕೆ ಮಾಡಿರುವ ಪ್ರಕರಣದಲ್ಲಿ ಮಾಜಿ ಸಚಿವ ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರನ್ನು ದೋಷಿಗಳು ಎಂದು ತೀರ್ಮಾನಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಲ್ಲರಿಗೂ ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟಾರೆ ₹21.5 ಲಕ್ಷ ದಂಡ ವಿಧಿಸಿ ಗುರುವಾರ ಮಹತ್ವದ ತೀರ್ಪು ನೀಡಿದೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಪ್ರಕಟಿಸಿದ್ದು, ದಂಡದ ಮೊತ್ತ ₹21.5 ಲಕ್ಷವನ್ನು 10 ದಿನಗಳಲ್ಲಿ ಠೇವಣಿ ಇಡುವುದು ಮತ್ತು ನಾಲ್ವರೂ ದೋಷಿಗಳು ತಲಾ 5 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಭದ್ರತೆ ಒದಗಿಸುವ ಷರತ್ತುಗಳಿಗೆ ಒಳಪಟ್ಟು ಒಂದು ತಿಂಗಳವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿದೆ.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ವ್ಯವಸ್ಥಾಪಕ ಹಾಗೂ ಒಂದನೇ ಆರೋಪಿ ಎಂಟಿವಿ ರೆಡ್ಡಿ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಕೆ ಮುನಿರಾಜು, ಕೆ ಶ್ರೀನಿವಾಸ್‌ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ. ಐದನೇ ಆರೋಪಿ ಬಿಡ್ಡಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ.

ಐಪಿಸಿ ಸೆಕ್ಷನ್‌ 120-B ಅಡಿ ಪಿತೂರಿ, ಸೆಕ್ಷನ್‌ 420 ಅಡಿ ವಂಚನೆ, ಸೆಕ್ಷನ್‌ 468 ಮತ್ತು 471ರ ಅಡಿ ನಕಲಿ ದಾಖಲೆಗಳ ಸೃಷ್ಟಿ ಹಾಗೂ ಬಳಕೆ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಾಲ್ವರೂ ಆರೋಪಿಗಳಿಗೆ ತಲಾ ಮೂರು ವರ್ಷ ಶಿಕ್ಷೆ ಹಾಗೂ ಕ್ರಮವಾಗಿ ತಲಾ ₹25,000, ತಲಾ ₹2 ಲಕ್ಷ ಮತ್ತು ತಲಾ ₹2 ಲಕ್ಷ ದಂಡ ವಿಧಿಸಲಾಗಿದೆ.

ಐಪಿಸಿ ಸೆಕ್ಷನ್‌ 467ರ ಅಡಿ ಮೌಲ್ಯಯುತ ಭದ್ರತೆಯ ನಕಲಿ ದಾಖಲೆ ಸೃಷ್ಟಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೊದಲನೇ ಆರೋಪಿ ರೆಡ್ಡಿ ಮತ್ತು ಎರಡನೇ ಆರೋಪಿ ಕೃಷ್ಣಯ್ಯ ಶೆಟ್ಟಿಗೆ ತಲಾ ಮೂರು ವರ್ಷ ಜೈಲು ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 409ರ ಅಡಿ ಕ್ರಿಮಿನಲ್‌ ನಂಬಿಕೆ ದ್ರೋಹ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ರೆಡ್ಡಿಗೆ ಮೂರು ವರ್ಷ ಜೈಲು 2 ಲಕ್ಷ ದಂಡ ವಿಧಿಸಲಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(1)(c) ಜೊತೆಗೆ 13(2) ಅಡಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ರೆಡ್ಡಿಗೆ ಒಂದು ವರ್ಷ ಜೈಲು ಮತ್ತು ₹50,000 ದಂಡ ವಿಧಿಸಲಾಗಿದೆ. ಶಿಕ್ಷೆಯ ಅವಧಿಯೂ ಏಕಕಾಲಕ್ಕೆ ಜಾರಿಯಾಗಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ದಂಡದ ಮೊತ್ತದ ಪೈಕಿ ರೆಡ್ಡಿ ಎಂಟಿವಿ ₹7.75 ಲಕ್ಷ, ಕೃಷ್ಣಯ್ಯ ಶೆಟ್ಟಿ ₹5.25 ಲಕ್ಷ, ಕೆ ಮುನಿರಾಜು ₹4.25 ಲಕ್ಷ, ಕೆ ಶ್ರೀನಿವಾಸ್‌ ₹4.25 ಲಕ್ಷ ಪಾವತಿಸಬೇಕಿದೆ.

Also Read
ಎಸ್‌ಬಿಎಂಗೆ ₹7.17 ಕೋಟಿ ವಂಚನೆ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರು ದೋಷಿಗಳು ಎಂದ ವಿಶೇಷ ನ್ಯಾಯಾಲಯ

ಶೆಟ್ಟಿ ಮತ್ತು ಇತರ ಆರೋಪಿಗಳು ಮೆಸರ್ಸ್‌ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ ಮೂಲಕ ನಕಲಿ ವೇತನ ಸರ್ಟಿಫಿಕೇಟ್‌ಗಳು, ಎಚ್‌ಎಎಲ್‌, ಐಟಿಐ, ಬಿಇಎಂಎಲ್‌, ಬಿಎಂಟಿಸಿ, ಬೆಸ್ಕಾಂ, ಎಡಿಇ, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್‌ ನೋವಾ ಟೆಕ್ನಾಲಜೀಸ್‌ ಇತ್ಯಾದಿ ಸಂಸ್ಥೆಗಳಲ್ಲಿ ನಾನಾ ಕಾರಣಗಳಿಂದ ಕೆಲಸ ತೊರೆದ ಉದ್ಯೋಗಿಗಳ ಫಾರ್ಮ್‌ ನಂಬರ್‌ 16 ಸಲ್ಲಿಸಿ ₹7.17 ಕೋಟಿ ಮೊತ್ತದ 181 ಗೃಹ ಸಾಲಗಳನ್ನು ಪಡೆದಿದ್ದಾರೆ. ಈ ಪೈಕಿ ವಿವಿಧ ಖಾತೆಗಳ ₹3.53 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದು, ಆ ಮೂಲಕ ಕಾನೂನುಬಾಹಿರವಾಗಿ ಬ್ಯಾಂಕ್‌ಗೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಬೆಂಗಳೂರಿನ ಕೆ ಜಿ ರಸ್ತೆಯಲ್ಲಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಮುಖ್ಯ ವಿಚಕ್ಷಣಾಧಿಕಾರಿಯು 30.1.2008ರಂದು ನೀಡಿದ ದೂರು ಆಧರಿಸಿ ಸಿಬಿಐ ಐಪಿಸಿ ಸೆಕ್ಷನ್‌ಗಳಾದ 120ಬಿ, 409, 419, 420, 467 ಮತ್ತು 471 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಪ್ರಕರಣ ದಾಖಲಿಸಿತ್ತು.

Kannada Bar & Bench
kannada.barandbench.com