ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಕಾಯಂಗೊಳಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೊಲಿಜಿಯಂ ಅನುಮೋದನೆ

ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿರುವ ರಾಜೇಶ್‌ ರೈ ಕೆ. ಅವರನ್ನು 2025ರ ಫೆಬ್ರವರಿ 1ರಂದು ಖಾಲಿಯಾಗಲಿರುವ ಹುದ್ದೆಗೆ ಕಾಯಂಗೊಳಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅನುಮೋದನೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಕಾಯಂಗೊಳಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೊಲಿಜಿಯಂ ಅನುಮೋದನೆ
Published on

ಕರ್ನಾಟಕ ಹೈಕೋರ್ಟ್‌ನ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಗುರುವಾರ ಅನುಮೋದಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರ ನೇತೃತ್ವದ ಕೊಲಿಜಿಯಂ ನ್ಯಾಯಮೂರ್ತಿಗಳಾದ ರಾಮಚಂದ್ರ ಡಿ. ಹುದ್ದಾರ್‌, ವೆಂಕಟೇಶ್‌ ನಾಯ್ಕ್‌ ಟಿ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರನ್ನು ಕಾಯಂಗೊಳಿಸುವ ಪ್ರಸ್ತಾವಕ್ಕೆ ಸಮ್ಮತಿ ಮುದ್ರೆ ಒತ್ತಿದೆ.

2025ರ ಫೆಬ್ರವರಿ 1ರಂದು ಖಾಲಿಯಾಗುವ ಹುದ್ದೆಗೆ ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿರುವ ರಾಜೇಶ್‌ ರೈ ಕೆ ಅವರನ್ನು ಕಾಯಂಗೊಳಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅನುಮೋದನೆ ನೀಡಿದೆ. ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರು 2025ರ ಫೆಬ್ರವರಿ 1ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

2023ರ ಜನವರಿ 21ರಂದು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಟಿ ವೆಂಕಟೇಶ ನಾಯಕ್‌ ಅವರನ್ನು 2023ರ ಫೆಬ್ರವರಿ 6ರಂದು ರಾಜ್ಯ ಸರ್ಕಾರದ ವಕೀಲರಾಗಿದ್ದ ವಿಜಯಕುಮಾರ್‌ ಎ. ಪಾಟೀಲ್‌ ಮತ್ತು ವಕೀಲ ರಾಜೇಶ್‌ ರೈ ಕಲ್ಲಂಗಳ ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಕರ್ನಾಟಕ ಹೈಕೋರ್ಟ್‌ನಲ್ಲಿ ಸದ್ಯ 49 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಐವರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದಾರೆ.

Attachment
PDF
Permanent Judges
Preview
Kannada Bar & Bench
kannada.barandbench.com