ಜಿಹಾದಿ ಸಭೆಯಲ್ಲಿ ಭಾಗವಹಿಸುವುದು ಉಗ್ರ ಚಟುವಟಿಕೆಯಲ್ಲ ಎಂದ ಕರ್ನಾಟಕ ಹೈಕೋರ್ಟ್‌; ಸುಪ್ರೀಂನಿಂದ ನೋಟಿಸ್‌ ಜಾರಿ

ನಿಷೇಧಿತವಲ್ಲದ ಸಂಘಟನೆಯ ಸದಸ್ಯರಿಗೆ ಜಿಹಾದಿ ಸಭೆ ಆಯೋಜಿಸುವುದು ಮತ್ತು ತರಬೇತಿ ಕೇಂದ್ರ ನಡೆಸುವುದು ಭಯೋತ್ಪಾದನಾ ಚಟುವಟಿಕೆಯಲ್ಲ ಎಂದು ಹೈಕೋರ್ಟ್‌ ಆದೇಶಿಸಿತ್ತು.
Supreme Court
Supreme Court
Published on

ಸರ್ಕಾರವು ನಿಷೇಧಿಸದ ಸಂಘಟನೆ ಆಯೋಜಿಸುವ ಜಿಹಾದಿ ಸಭೆಯಲ್ಲಿ ಭಾಗವಹಿಸುವುದು ಭಯೋತ್ಪಾದನಾ ಚಟುವಟಿಕೆಯಾಗುವುದಿಲ್ಲ ಎಂದು ಆದೇಶ ಮಾಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ [ಭಾರತ ಸರ್ಕಾರ ವರ್ಸಸ್‌ ಸಲೀಂ ಖಾನ್‌].

ಕೇಂದ್ರ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಸಿಜೆಐ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದೆ.

ಕಾನೂನುವಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಸರ್ಕಾರವು ನಿಷೇಧ ಮಾಡದಿರುವ ಸಂಘಟನೆಯು ನಡೆಸುವ ಜಿಹಾದಿ ಸಭೆಯಲ್ಲಿ ಭಾಗವಹಿಸುವುದು, ತರಬೇತಿ ಪರಿಕರಗಳ ಖರೀದಿಸುವುದು ಮತ್ತು ತರಬೇತಿ ಆಶ್ರಯ ಕೇಂದ್ರಗಳನ್ನು ಒದಗಿಸುವುದು ಯುಎಪಿಎ ಸೆಕ್ಷನ್‌ 2(ಕೆ) ಅಡಿ ಭಯೋತ್ಪಾದನಾ ಕೃತ್ಯವಾಗುವುದಿಲ್ಲ ಎಂದು ಕಳೆದ ಏಪ್ರಿಲ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶದಲ್ಲಿ ಹೇಳಿತ್ತು.

ಅಲ್ಲದೇ, ಆರೋಪಿಯು ನಿಷೇಧಿತ ಸಂಘಟನೆಯ ಜೊತೆ ಗುರಿಸಿಕೊಂಡಿಲ್ಲ ಎಂದು ಯುಎಪಿಎ ಅಡಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗೆ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಸ್‌ ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿತ್ತು.

“ಹಾಲಿ ಪ್ರಕರಣದಲ್ಲಿ ಯುಎಪಿಎ ಅಡಿ ನಿಷೇಧಿಸಲ್ಪಟ್ಟಿರುವ ಸಂಘಟನೆಯ ಜೊತೆ 11ನೇ ಆರೋಪಿ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿಲ್ಲ. ಆರೋಪಿಯು ಅಲ್‌ ಹಿಂದ್‌ ಸಂಘಟನೆಯ ಸದಸ್ಯರಾಗಿದ್ದು, ಅದು ಯುಎಪಿಎ ಅಡಿ ನಿಷೇಧಿತ ಸಂಘಟನೆಯಲ್ಲ. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಆರೋಪಿಯು ಯಾವುದೇ ಅಪರಾಧದಲ್ಲಿ ಅಥವಾ ಭಯೋತ್ಪಾದನಾ ಚಟುವಟಿಕೆಗಳಲ್ಲಿ ದೋಷಿಯಾಗಿದ್ದಾರೆ ಎಂದು ಬಿಂಬಿಸುವುದಿಲ್ಲ. 11ನೇ ಆರೋಪಿಯ ವಿರುದ್ಧ ಮೇಲ್ನೋಟಕ್ಕೆ ಸತ್ಯ ಎಂದು ಹೇಳಲಾಗುವ ಯಾವುದೇ ಸಕಾರಣ ಹೊಂದಿದ ಆಧಾರಗಳು ಇಲ್ಲ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿತ್ತು.

ಪೊಲೀಸರು ತಮಗೆ ದೊರೆತಿದ್ದ ಮಾಹಿತಿ ಆಧರಿಸಿ 17 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ. ಆನಂತರ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಿದ್ದು, ಅದು ತನಿಖೆಯ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಹೆಚ್ಚಿನ ಮಾಹಿತಿಯನ್ನು ಹೈಕೋರ್ಟ್‌ ಮುಂದಿಟ್ಟಿತ್ತು.

ಆನಂತರ ಆರೋಪಿಗಳ ವಿರುದ್ಧ ಯುಎಪಿಎ ಸೆಕ್ಷನ್‌ಗಳಾದ 18 (ಪಿತೂರಿ), 18ಎ (ಭಯೋತ್ಪಾದನಾ ಚಟುವಟಿಕೆಗಳ ತರಬೇತಿ ಕೇಂದ್ರ) 20 (ಉಗ್ರ ಸಂಘಟನೆ ಅಥವಾ ಸಮೂಹದ ಸದಸ್ಯತ್ವ), 39 (ಉಗ್ರ ಸಂಘಟನೆಗೆ ಬೆಂಬಲ) ಮತ್ತು ಐಪಿಸಿ ಸೆಕ್ಷನ್‌ 120ಬಿ (ಕ್ರಿಮಿನಲ್‌ ಪಿತೂರಿ) ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಅಧೀನ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.  

Kannada Bar & Bench
kannada.barandbench.com