ಉದ್ಯೋಗ ನಷ್ಟ, ಉದ್ಯೋಗದಾತರ ಶೋಷಣೆ ಹಾಗೂ ಏಜೆಂಟರುಗಳ ಮೋಸಕ್ಕೆ ತುತ್ತಾದ ಭಾರತೀಯ ನಾಗರಿಕರಿಗೆ ನೆರವು ನೀಡಲು ಸಮಗ್ರ ಯೋಜನೆ ರೂಪಿಸಬೇಕು ಮತ್ತು ಸಹಾಯ ಕೇಂದ್ರ ಸ್ಥಾಪಿಸಬೇಕು ಎಂದು ಕೋರಿರುವ ಅರ್ಜಿಯ ಸಂಬಂಧ ಕೇಂದ್ರ, ಹನ್ನೆರಡು ರಾಜ್ಯಗಳು ಹಾಗೂ ಸಿಬಿಐಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಕೊಲ್ಲಿರಾಷ್ಟ್ರಗಳ ಭಾರತೀಯರ ಪುನರ್ವಸತಿಗಾಗಿ ಆರ್ಥಿಕ ಮತ್ತು ಕಾನೂನಾತ್ಮಕವಾದ ನೆರವು ನೀಡಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯರು ಅದರಲ್ಲಿಯೂ ವಿಶೇಷವಾಗಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಕೇರಳ, ಒಡಿಶಾ, ತಮಿಳುನಾಡು, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಕೀಲ ಹಿತೇಂದ್ರನಾಥ್ ರಥ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಹೈದರಾಬಾದ್ ಮೂಲದ ವೆಬ್ ಏಜೆನ್ಸಿಯೊಂದು ಕೊಲ್ಲಿ ದೇಶಗಳಲ್ಲಿ ಉದ್ಯೋಗದ ಹೆಸರಿನಲ್ಲಿ ಪದೇ ಪದೇ ಜನರಿಗೆ ಮೋಸ ಮಾಡಿದ್ದನ್ನು ಗಲ್ಫ್ ಸುದ್ದಿ ಜಾಲತಾಣವೊಂದು ಬಹಿರಂಗಪಡಿಸಿದ್ದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿಯ ಪ್ರಮುಖಾಂಶಗಳು:
ಅನೇಕ ಭಾರತೀಯ ಕಾರ್ಮಿಕರು ಏಜೆಂಟರಿಂದ ಮೋಸ ಹೋಗುತ್ತಾರೆ. ಏಜೆಂಟರು ಭರವಸೆ ಕೊಟ್ಟಂತೆ ಅವರಿಗೆ ಉದ್ಯೋಗ ಸಿಗುವುದಿಲ್ಲ.
ಆ ಕಾರ್ಮಿಕರ ಸಂಬಳ ತುಂಬಾ ಕಡಿಮೆ, ಇಲ್ಲವೇ ವೇತನ ಪಾವತಿಯಾಗುವುದಿಲ್ಲ. ಅವರಲ್ಲಿ ಕೆಲವರನ್ನು ಏಜೆಂಟರು ಮಾರಾಟ ಮಾಡಿಬಿಡುತ್ತಾರೆ ಮತ್ತು ಅವರಿಗೆ ಜೀವಭದ್ರತೆ ಇಲ್ಲ.
ಅನೇಕ ಸಂದರ್ಭಗಳಲ್ಲಿ ರಾಯಭಾರಿ ಕಚೇರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಇಲ್ಲವೇ ಪಾಕಿಸ್ತಾನ, ಶ್ರೀಲಂಕಾ, ಚೀನಾ, ಬಾಂಗ್ಲಾದೇಶಗಳು ಮಾಡುತ್ತಿರುವಂತೆ ವಿನಿಮಯ ಕಾರ್ಯಕ್ರಮ ಮತ್ತು ಸನ್ನಡತೆ ಆಧಾರದಲ್ಲಿ ಬಂಧಿತರನ್ನು ಮರಳಿ ತರುವ ಯತ್ನಕ್ಕೂ ಮುಂದಾಗುತ್ತಿಲ್ಲ.
ಕಾರ್ಮಿಕರ ರಕ್ಷಣೆಗಾಗಿ ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಹಲವು ಒಪ್ಪಂದಗಳು ಏರ್ಪಟ್ಟಿದ್ದರೂ ಕೂಡ ಮಾನವ ಹಕ್ಕುಗಳ ಉಲ್ಲಂಘನೆ ನಿಂತಿಲ್ಲ. ದೀರ್ಘವಾದ ಕೆಲಸದ ಅವಧಿ ಮತ್ತು ನೆಪಮಾತ್ರದ ವೇತನ ಪಾವತಿ ಮೂಲಕ ಕಾರ್ಮಿಕರ ದುರುಪಯೋಗ ಮತ್ತು ಶೋಷಣೆ ನಡೆಯುತ್ತಿದೆ.
ವಿದೇಶ/ಕೊಲ್ಲಿ ದೇಶಗಳ ಜೈಲುಗಳಲ್ಲಿ ಬಂಧಿತರಾಗಿರುವ 8,189 ಮಂದಿ ಹಾಗೂ ಮರಣದಂಡನೆ ಶಿಕ್ಷೆಗೆ ತುತ್ತಾಗಿರುವ ಸುಮಾರು 44 ಭಾರತೀಯ ನಾಗರಿಕರಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಇನ್ನಾವುದೇ ಪ್ರಾಧಿಕಾರದ ಮೂಲಕ ಕಾನೂನು ನೆರವು ನೀಡಬೇಕು.
ವಿದೇಶದಲ್ಲಿ ಮರಣ ಹೊಂದಿದ ಭಾರತೀಯ ನಾಗರಿಕರ ಮೃತ ದೇಹಗಳನ್ನು ಮರಳಿ ತರಲು ಮತ್ತು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು / ವಿಮೆ ಮತ್ತು ಕಾನೂನು ನೆರವು ನೀಡಲು ಕುಂದುಕೊರತೆ ಪರಿಹಾರ ಕೇಂದ್ರವೊಂದನ್ನು ಸ್ಥಾಪಿಸಲು ಕೋರ್ಟ್ ನಿರ್ದೇಶನ ನೀಡಬೇಕು.
ಮಾನವ ಕಳ್ಳಸಾಗಣಿಕೆಗೆ ಸಂಬಂಧಿಸಿದ ಅಪರಾಧಗಳು, ಭಾರತ ಮತ್ತು ವಿದೇಶಗಳಲ್ಲಿರುವ ಏಜೆಂಟರ ವಿರುದ್ಧದ ಪ್ರಕರಣಗಳು, ನೌಕರರ ದೌರ್ಜನ್ಯ ಇತ್ಯಾದಿಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾದಳವನ್ನು (ಸಿಬಿಐ) ನೋಡಲ್ ಏಜೆನ್ಸಿಯಾಗಿ ನೇಮಿಸಬೇಕು.