ಉತ್ತರ ಕರ್ನಾಟಕ ಭಾಗದ ಮಹತ್ವಕಾಂಕ್ಷಿ ನೀರಾವರಿ ಯೋಜನೆಯಾದ ಕಳಸಾ- ಬಂಡೂರಿ ನಾಲಾ ಯೋಜನೆಗೆ ಅಗತ್ಯವಿರುವೆಡೆ ಅನುಮತಿ ಪಡೆದು ಕರ್ನಾಟಕ ಸರ್ಕಾರ ಮುಂದುವರಿಯಲಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕಳಸಾ ಬಂಡೂರಿ ನಾಲಾ ಯೋಜನೆಗೆ ಯಾವುದೇ ಪರವಾನಗಿ ಇಲ್ಲದೇ ಕರ್ನಾಟಕ ಸರ್ಕಾರ ಕಾಮಗಾರಿ ಮುಂದುವರಿಸುತ್ತಿದೆ ಎಂದು ಆಕ್ಷೇಪಿಸಿ ಗೋವಾ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ.
ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ಮಾಡಿದೆ. ಅಗತ್ಯ ಇರುವ ಕಡೆ ಕರ್ನಾಟಕ ಅನುಮತಿ ಪಡೆದು ಮುಂದುವರಿಯಲಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠವು ಹೇಳಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, ಕಾಮಗಾರಿ ನಡೆಸಲು ಅನುಮತಿಯ ಅಗತ್ಯವಿರುವೆಡೆ ಅನುಮತಿಯನ್ನು ಪಡೆದೇ ಮುಂದುವರಿಯುತ್ತಿದ್ದೇವೆ. ಈ ಪ್ರಕರಣದಲ್ಲಿ ಅಂತಿಮ ವಿಚಾರಣೆಯಾಗಬೇಕಿದೆ ಎಂದು ವಾದಿಸಿದರು. ಇದನ್ನು ಒಪ್ಪಿರುವ ಪೀಠವು ಗೋವಾದ ತಕರಾರನ್ನು ವಿಲೇವಾರಿ ಮಾಡಿದೆ. ಜುಲೈನಲ್ಲಿ ಪ್ರಕರಣದ ಮರುನಿಗದಿ ಮಾಡಲಾಗಿದೆ.
2108ರ ಆಗಸ್ಟ್‌ನಲ್ಲಿ ಮಹದಾಯಿ ನ್ಯಾಯ ಮಂಡಳಿಯು ಕರ್ನಾಟಕಕ್ಕೆ 5.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ತೀರ್ಪು ಪ್ರಕಟಿಸಿತ್ತು. ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಕರ್ನಾಟಕದ ಒಟ್ಟು ಬೇಡಿಕೆಯ 7.56 ಟಿಎಂಸಿ ಪೈಕಿ 3.90 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ವಿದ್ಯುಚ್ಛಕ್ತಿ ಉತ್ಪಾದನೆಗೆ 8.02 ಟಿಎಂಸಿ ನೀರು ಸೇರಿ 13. 07 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಮಹದಾಯಿ ಜಲಾನಯನ ಪ್ರದೇಶದಲ್ಲಿ 1.50 ಟಿಎಂಸಿ ನೀರು ಬಳಕೆ ಮಾಡಲು ನ್ಯಾಯಮೂರ್ತಿ ಜೆ ಎಂ ಪಾಂಚಾಲ್ ಅವರ ನೇತೃತ್ವದ ಪೀಠ ಆದೇಶಿಸಿತ್ತು.
ಹುಬ್ಬಳ್ಳಿ-ಧಾರವಾಡ, ಗದಗ, ನರಗುಂದ, ನವಲಗುಂದ ಸೇರಿದಂತೆ ಉತ್ತರ ಕರ್ನಾಟಕ ಹದಿಮೂರು ಪಟ್ಟಣ ಹಾಗೂ ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಮಹದಾಯಿ (ಕಳಸಾ-ಬಂಡೂರಿ ನಾಲಾ) ವಿಸ್ತೃತ ಯೋಜನಾ ವರದಿಗೆ ಈಚೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.