

ಅಪ್ರಾಪ್ತ ಸಂತ್ರಸ್ತೆಯ ಸ್ತನ ಹಿಡಿಯುವುದು, ಆಕೆ ಧರಿಸಿದ್ದ ಪೈಜಾಮಾದ ಲಾಡಿ ಕಳಚುವುದು ಹಾಗೂ ಆಕೆಯನ್ನು ಬಲವಂತವಾಗಿ ಕಿರಿದಾದ ಸೇತುವೆಯೊಂದರ ಕೆಳಗೆ ಎಳೆದೊಯ್ಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧವಾಗದು ಎಂದು ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿದೆ.
ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ತೀರ್ಪು ನೀಡುವಾಗ ಕೇವಲ ಕಾನೂನು ಮಾತ್ರವಲ್ಲ, ಸಹಾನುಭೂತಿಯೂ ಆಧಾರವಾಗಿರಬೇಕು ಎಂದು ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಒತ್ತಿ ಹೇಳಿತು.
ಆರೋಪಿಗಳು ಅತ್ಯಾಚಾರಕ್ಕೆ ಸಿದ್ಧತೆಯನ್ನಷ್ಟೇ ನಡೆಸಿದ್ದರು ಅತ್ಯಾಚಾರ ಯತ್ನ ನಡೆದಿಲ್ಲ ಎಂಬ ಹೈಕೋರ್ಟ್ ನಿರ್ಣಯವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್ ಸಂತ್ರಸ್ತರ ಅಸಹಾಯಕತೆಯನ್ನು ಪರಿಗಣಿಸದೆ ಹೋದರೆ ನ್ಯಾಯಾಲಯಗಳು ಪೂರ್ಣ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ.
ನ್ಯಾಯಾಧೀಶರಲ್ಲಿ ಸಹಜ ಸಂವೇದನಾಶೀಲತೆ ಮತ್ತು ಸೂಕ್ಷ್ಮ ವಿವೇಚನೆಯನ್ನು ಬೆಳೆಸಲು ಕ್ರಮಕೈಗೊಳ್ಳುವ ಅಗತ್ಯ ಇದೆ ಎಂದು ಅದು ಹೇಳಿತು. ಆದರೆ ದಿಢೀರನೆ ತಾನೇ ಹೊಸ ಮಾರ್ಗಸೂಚಿಗಳನ್ನು ರೂಪಿಸುವುದನ್ನು ಒಪ್ಪದ ನ್ಯಾಯಾಲಯ ಇಂತಹ ಪ್ರಯತ್ನಗಳ ಬಗ್ಗೆ ಸಮಗ್ರ ಅಧ್ಯಯನ ಅಗತ್ಯವಿದೆ ಎಂದಿತು.
ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಂವೇದನಾಶೀಲತೆ ಬೆಳೆಸುವ ಕುರಿತಂತೆ ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯು ಕರಡು ಮಾರ್ಗದರ್ಶಿ ವರದಿಯೊಂದನ್ನು ರೂಪಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಅದು ಸೂಚಿಸಿತು. ಇದೇ ವೇಳೆ, ಈ ಮಾರ್ಗಸೂಚಿಗಳು ಸರಳ ಭಾಷೆಯಲ್ಲಿ, ಸಾಮಾನ್ಯರಿಗೆ ಅರ್ಥವಾಗುವಂತೆ ಇರಬೇಕು; ಜಟಿಲ ಮತ್ತು ವಿದೇಶಿ ಪದಪ್ರಯೋಗಗಳಿಂದ ತುಂಬಿರಬಾರದು ಎಂದು ಕೂಡ ಅದು ಸ್ಪಷ್ಟಪಡಿಸಿತು.
ಹಿನ್ನೆಲೆ: ಉತ್ತರ ಪ್ರದೇಶದಲ್ಲಿ ಅಪ್ರಾಪ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 18 (ಅಪರಾಧ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಶಿಕ್ಷೆ) ಬದಲಿಗೆ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 9/10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
"... ಆರೋಪಿ ಪವನ್ ಮತ್ತು ಆಕಾಶ್ ವಿರುದ್ಧದ ಆರೋಪವೆಂದರೆ ಅವರು ಸಂತ್ರಸ್ತೆಯ ಸ್ತನಗಳನ್ನು ಬಲವಂತವಾಗಿ ಸ್ಪರ್ಶಿಸಿದ್ದರು, ಆಕಾಶ್ ಸಂತ್ರಸ್ತೆಯ ಕೆಳ ಉಡುಪನ್ನು ಕಳಚಲು ಪ್ರಯತ್ನಿಸಿದ್ದ ಮತ್ತು ಈ ಉದ್ದೇಶಕ್ಕಾಗಿಯೇ ಆಕೆಯ ಕೆಳ ಉಡುಪಿನ ಲಾಡಿಯನ್ನು ಸೆಳೆದು ಕಿರುಸೇತುವೆಯ ಕೆಳಗೆ ಎಳೆದೊಯ್ಯಲು ಆರೋಪಿಗಳು ಯತ್ನಿಸಿದ್ದರು ಎಂಬುದಾಗಿದೆ. ಆದರೆ ಸಾಕ್ಷಿಗಳ ಮಧ್ಯಪ್ರವೇಶದಿಂದಾಗಿ ಅವರು ಸಂತ್ರಸ್ತೆಯನ್ನು ಬಿಟ್ಟು ಘಟನಾ ಸ್ಥಳದಿಂದ ಪರಾರಿಯಾಗಿದ್ದರು ಎಂಬುದಾಗಿದೆ. ಆದರೆ, ಈ ಅಂಶಗಳು ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ಊಹಿಸಲು ಸಾಕಾಗುವುದಿಲ್ಲ. ಏಕೆಂದರೆ ಈ ಸಂಗತಿಗಳನ್ನು ಹೊರತುಪಡಿಸಿ ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದರು ಎನ್ನಲು ಮತ್ತಾವುದೇ ಕೃತ್ಯಗಳನ್ನು ಆರೋಪಿಸಲಾಗಿಲ್ಲ” ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ತಿಳಿಸಿದ್ದರು.
"... ಆರೋಪಿಯ ಕೃತ್ಯದಿಂದಾಗಿ ಸಂತ್ರಸ್ತೆ ಬೆತ್ತಲೆಯಾದಳು ಅಥವಾ ವಿವಸ್ತ್ರಳಾದಳು ಎಂದು ಸಾಕ್ಷಿಗಳು ಹೇಳಿಲ್ಲ. ಸಂತ್ರಸ್ತೆಯ ಮೇಲೆ ಲಿಂಗ ಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ಎಸಗಲು ಆರೋಪಿ ಯತ್ನಿಸಿದನೆಂಬ ಯಾವುದೇ ಆರೋಪವಿಲ್ಲ" ಎಂದು ಆದೇಶದಲ್ಲಿ ವಿವರಿಸಲಾಗಿತ್ತು.
ಕುತೂಹಲಕಾರಿ ಅಂಶವೆಂದರೆ ಅಲಾಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಪಿಐಎಲ್ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಮಾರ್ಚ್ 24ರಂದು ನಿರಾಕರಿಸಿತ್ತು. ನಂತರ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಆದೇಶಕ್ಕೆ ತಡೆ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಅಲಾಹಾಬಾದ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದೆ.
[ತೀರ್ಪಿನ ಪ್ರತಿ]