ಹೊರಗಿನವರಿಲ್ಲದೆ ಮನೆಯೊಳಗೆ ಜಾತಿ ನಿಂದನೆ ನಡೆದರೆ ಎಸ್‌ಸಿ-ಎಸ್‌ಟಿ ಕಾಯಿದೆಯ ಉಲ್ಲಂಘನೆಯಾಗದು: ಅಲಾಹಾಬಾದ್ ಹೈಕೋರ್ಟ್

ವಿದ್ಯಾರ್ಥಿಯ ತಂದೆಯನ್ನು ಜಾತಿ ಹೆಸರಿನಿಂದ ನಿಂದಿಸಿದ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾದ ಕ್ರಿಮಿನಲ್ ವಿಚಾರಣೆ ಪ್ರಶ್ನಿಸಿ ಶಿಕ್ಷಣ ತಜ್ಞರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ
ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ

ಹೊರಗಿನವರು ಯಾರೂ ಇಲ್ಲದಿದ್ದಾಗ ಮನೆಯೊಳಗೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರ ಜಾತಿ ಪ್ರಸ್ತಾಪಿಸಿ ಮೌಖಿಕ ನಿಂದನೆ ಮಾಡುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ- 1989ರ ಅಡಿ ಅಪರಾಧವಾಗದು ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಹೇಳಿದೆ [ಭೈಯಾ ಲಾಲ್ ಸಿಂಗ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಕಾಯಿದೆಯ ಸೆಕ್ಷನ್ 3 (1) (ಎಸ್) ಅಡಿಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದ್ದರೆ ಮಾತ್ರ ವಿಚಾರಣೆ ನಡೆಸಬಹುದಾಗಿದೆ ಎಂದು ನ್ಯಾ. ಶಮೀಮ್ ಅಹ್ಮದ್ ಹೇಳಿದರು.

12ನೇ ತರಗತಿ ಪರೀಕ್ಷೆಯಲ್ಲಿ ತನ್ನ ಮಗ ಹಾಗೂ ಇತರ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಿದ ಆರೋಪ ಹೊರಿಸಿ ಶಾಲಾ ಮಾಲೀಕರ ವಿರುದ್ಧ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿದ್ಯಾರ್ಥಿಗಳ ಫಲಿತಾಂಶ ಕುರಿತು ತಾನು ಪ್ರತಿಭಟನೆ ನಡೆಸದಿರಲು ಆರೋಪಿ ಮತ್ತು ಆತನ ಸಹಚರರು ತನಗೆ ರೂ.5 ಲಕ್ಷ ನೀಡುವ ಆಮಿಷ ಒಡ್ಡಿದ್ದರು. ಅಲ್ಲದೆ, ಆರೋಪಿಗಳು ತನ್ನ ಮನೆಗೆ ಬಂದು ಜಾತಿ ಹೆಸರು ಬಳಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಆದರೆ, ಆರೋಪಿಗಳು ದೂರುದಾರರನ್ನು ಸಾರ್ವಜನಿಕ ಸ್ಥಳದಲ್ಲಿ ಜಾತಿ ಹೆಸರಿನಿಂದ ನಿಂದಿಸಿಲ್ಲ. ನಿಂದನೆಯ ಸ್ವರೂಪದ ಬಗ್ಗೆ ದೂರುದಾರರು ಏನನ್ನೂ ಹೇಳಿಲ್ಲ ಹೀಗಾಗಿ, ಕಾಯಿದೆಯ ಸೆಕ್ಷನ್ 3 (1) (ಎಸ್) ಅಡಿಯಲ್ಲಿ ಮಾಡಲಾದ ಆರೋಪಗಳು ಅಪರಾಧವಲ್ಲ ಎಂದು ಪೀಠ ತೀರ್ಮಾನಿಸಿತು

"ಸಮಾಜದ ದುರ್ಬಲ ವರ್ಗದ ಸದಸ್ಯರನ್ನು ಸಾರ್ವಜನಿಕ ನೋಟದ ವ್ಯಾಪ್ತಿಗೆ ಬರುವ ಯಾವುದೇ ಸ್ಥಳದಲ್ಲಿ ಅವಮಾನ ಮತ್ತು ಕಿರುಕುಳಕ್ಕೆ ಒಳಪಡಿಸುವುದು ಕಾಯಿದೆಯಡಿ ಅಪರಾಧವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಸ್ವತಂತ್ರ ಸಾಕ್ಷಿಗಳು ದೂರುದಾರರ ವಾದವನ್ನು ಬೆಂಬಲಿಸಲಿಲ್ಲ ಮತ್ತು ಘಟನೆ ನಡೆದಾಗ ಅವರು ಮನೆಯ ಒಳಗೆ ಇರಲಿಲ್ಲ ಎಂದು ಕೂಡ ಅದು ತಿಳಿಸಿದೆ.

Also Read
ಖಾಸಗಿ ಅಥವಾ ಸಾರ್ವಜನಿಕ ಸ್ಥಳ ಲೆಕ್ಕಿಸದೆ ದಮನಿತರನ್ನು ರಕ್ಷಿಸಬೇಕಿದೆ: ಸಿಜೆಐ ಡಿ ವೈ ಚಂದ್ರಚೂಡ್

ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿದ ನ್ಯಾಯಾಲಯವು, ವಿದ್ಯಾರ್ಥಿಗಳ ಫಲಿತಾಂಶ ಮತ್ತು ಪರೀಕ್ಷೆಯು ಕೇಂದ್ರೀಯ ಶಾಲಾ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಸಂಪೂರ್ಣ ಜವಾಬ್ದಾರಿಯಾಗಿದ್ದು ಆರೋಪಿ ಶಾಲಾ ಮಾಲೀಕರಿಗೂ ಈ ಪ್ರಕ್ರಿಯೆಗೂ ಯಾವುದೇ ಸಂಬಂಧ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಂಗ ವಿವೇಚನೆ ಬಳಸದೆ ಆರೋಪಪಟ್ಟಿಯ ವಿಚಾರಗಳನ್ನು ಮಾತ್ರವೇ ಅವಲಂಬಿಸಿದೆ ಎಂದು ನ್ಯಾಯಾಲಯವು ಅವಲೋಕಿಸಿತು.

ಆರೋಪಿ ಮತ್ತು ಅವನ ಸಹಚರರು ಹಾಜರಿದ್ದ ದೂರುದಾರರ ಮನೆಯೊಳಗೆ ಈ ಘಟನೆ ನಡೆದಿರುವುದರಿಂದ ಪ್ರಕರಣಕ್ಕೆ ಸದಂಬಂಧಿಸಿದಂತೆ ಐಪಿಸಿ 143ನೇ (ಕಾನೂನುಬಾಹಿರ ಸಭೆ) ಸೆಕ್ಷನ್‌ ಅನ್ವಯವಾಗದು ಎಂದು ನ್ಯಾಯಾಲಯ ತಿಳಿಸಿದೆ.

ಪರೀಕ್ಷಾ ಫಲಿತಾಂಶಗಳ ಘೋಷಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರವಿಲ್ಲದಿದ್ದರೂ ಆರೋಪಿಗಳು ಹಣದ ಆಮಿಷ ಒಡ್ಡಿದ್ದಾರೆ ಎಂಬ ದೂರುದಾರರವಾದ ನಂಬಲಸಾಧ್ಯ ಎಂದು ಅದು ನುಡಿದಿದೆ.

ಕಡೆಗೆ ಈ ಘಟನೆ ನಡೆದಂತೆ ಕಾಣುತ್ತಿಲ್ಲ ಎಂದು ತೀರ್ಪು ನೀಡಿದ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಸಮನ್ಸ್ ಆದೇಶವನ್ನು ರದ್ದುಗೊಳಿಸಿತು. ಆರೋಪಿಗಳ ವಿರುದ್ಧದ ಸಂಬಂಧಿತ ಕ್ರಿಮಿನಲ್ ವಿಚಾರಣೆಯನ್ನು ಕೂಡ ರದ್ದುಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Bhaiya Lal Singh v. State of UP.pdf
Preview

Related Stories

No stories found.
Kannada Bar & Bench
kannada.barandbench.com