ಕೊಡವರಿಗೆ ಸ್ವಾಯತ್ತತೆ: ಮೂಲ ನಿವಾಸಿಗಳಾದ ಎಸ್‌ಸಿ, ಎಸ್‌ಟಿ, ಬುಡಕಟ್ಟು ಆದಿವಾಸಿಗಳಿಂದ ಮಧ್ಯಂತರ ಅರ್ಜಿ

ಮೂಲ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮಧ್ಯಂತರ ಅರ್ಜಿದಾರರಿಗೆ ಮತ್ತು ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮೂಲ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿದ ಹೈಕೋರ್ಟ್‌.
Karnataka High Court
Karnataka High Court

ಕೊಡವರಿಗೆ ಪ್ರತ್ಯೇಕ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡುವ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಕೊಡಗು ಜಿಲ್ಲೆಯ ಮೂಲ ನಿವಾಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಮಧ್ಯಂತರ ಅರ್ಜಿ ಸಲ್ಲಿಸಿವೆ.

ಕೊಡವರಿಗೆ ಪ್ರತ್ಯೇಕ ಸ್ಥಾನಮಾನಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಲ್ಲಿಸಿರುವ ಮನವಿ ಪರಿಗಣಿಸಬೇಕು ಹಾಗೂ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಸುವ ಪ್ರತ್ಯೇಕ ಆಯೋಗ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಾಡಲಾಗಿರುವ ಮನವಿ ಪರಿಗಣಿಸಲ್ಪಟ್ಟರೆ ಅದು ಇಡೀ ಜಿಲ್ಲೆಯ ಮೂಲ ನಿವಾಸಿ ಬುಡಕಟ್ಟು ಜನಾಂಗಗಳ ಬದುಕು ಮತ್ತು ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಗಿದ್ದರೂ, ಒಂದು ಸೀಮಿತ ಜಾತಿಗೆ ಲಾಭ ಮಾಡಲಿದೆ. ಅರ್ಜಿದಾರರ ಮನವಿ ಪ್ರತ್ಯೇಕ ರಾಜ್ಯದ ಬೇಡಿಕೆ ಸ್ವರೂಪ ಹೊಂದಿದೆ. ಮೂಲ ಅರ್ಜಿಯಲ್ಲಿನ ಬೇಡಿಕೆಗಳು ಇಡೀ ಕೊಡಗು ಜಿಲ್ಲೆಯ ಜನತೆ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.30ರಷ್ಟು ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿ, ಬುಡಕಟ್ಟು, ಹಿಂದುಳಿದ ವರ್ಗಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ ಮಧ್ಯಂತರ ಅರ್ಜಿ ವಿಚಾರಣೆಗೆ ಅಂಗೀಕರಿಸಿ, ನಮ್ಮ ಅಹವಾಲು ಆಲಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ಪರವಾಗಿ ಹಾಜರಾಗಿದ್ದ ಸುಬ್ರಮಣಿಯನ್ ಸ್ವಾಮಿ ಅವರು, ಸಂವಿಧಾನದತ್ತ ಅವಕಾಶವಾಗಿರುವ ಪ್ರತ್ಯೇಕ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಪ್ರತ್ಯೇಕ ರಾಜ್ಯದ ಬೇಡಿಕೆ ನಮ್ಮದಲ್ಲ. ಈ ವಿಚಾರದಲ್ಲಿ ಕೊಡಗಿನವರ ಬಗ್ಗೆ ಕಪೋಲಕಲ್ಪಿತ ಸುದ್ದಿ ಹರಿಯಬಿಡಲಾಗುತ್ತಿದೆ ಎಂದರು.

Also Read
ಕೊಡವರಿಗೆ ಪ್ರತ್ಯೇಕ ಸ್ಥಾನಮಾನ: ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ಆದೇಶ

ಈ ವೇಳೆ ಮಧ್ಯಂತರ ಅರ್ಜಿ ವಿಚಾರಣೆಗೆ ಅಂಗೀಕರಿಸಿದರೆ ವಿಷಯವನ್ನು ಇನ್ನಷ್ಟು ವಿಸ್ತೃತವಾಗಿ ಪರಾಮರ್ಶಿಸುವ ಅವಕಾಶಗಳು ಸಿಕ್ಕಂತಾಗುವುದಿಲ್ಲವೇ ಎಂದು ಪೀಠ ಪ್ರಶ್ನಿಸಿತು. ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು. ಹೀಗಾಗಿ, ಮಧ್ಯಂತರ ಅರ್ಜಿ ವಿಚಾರಣೆಗೆ ಪರಿಗಣಿಸಿದ ಪೀಠವು ಮೂಲ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮಧ್ಯಂತರ ಅರ್ಜಿದಾರರಿಗೆ ಮತ್ತು ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮೂಲ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿತು.

ಮೂಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಿಸಿ ಕೊಡಗು ಜಿಲ್ಲೆಯ ಮೂಲ ನಿವಾಸಿ ಎಸ್‌ಸಿ, ಎಸ್‌ಟಿ, ಬುಡಕಟ್ಟು, ಆದಿವಾಸಿ, ಒಬಿಸಿ ಸಮುದಾಯಗಳನ್ನು ಪ್ರತಿನಿಧಿಸುವ ಜಿಲ್ಲೆಯ ಕೊಡವ ಬೋಣಿಪಟ್ಟ ಸಮಾಜ, ಕೂಯ್ಯುವ ಸಮಾಜ, ಅಖಿಲ ಕೊಡಗು ಪಣಿಕ ಸಮಾಜ, ಸವಿತಾ ಸಮಾಜ ಕೈಕೇರಿ, ಕೊಡಗು ಬಣ್ಣ ಸಮಾಜ, ಕೊಡಗು ಕೊಡವ ಮಡಿವಾಳ ಸಮಾಜ, ಕೊಲೆಯ ಸಮಾಜ, ಕೊಡಗು ಜಿಲ್ಲಾ ಕೆಂಬಟ್ಟಿ ಅಭಿವೃದ್ಧಿ ಸಮಾಜ, ಕೊಡಗು ಹೆಗ್ಗಡೆ ಸಂಘ ಮತ್ತು ಸಮಾಜ, ಕೊಡಗು ಜಿಲ್ಲಾ ಗೊಲ್ಲ ಸಮಾಜ ಸೇರಿದಂತೆ 10 ಸಂಘ-ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿವೆ.

Related Stories

No stories found.
Kannada Bar & Bench
kannada.barandbench.com