ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಇಂದು ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ರಾಜ್ಯ ಪುನರ್‌ ವಿಂಗಡಣಾ ಕಾಯಿದೆ 1956ರ ಸೆಕ್ಷನ್‌ 3,7 & 8 ರ ಅಡಿ ಕೆಲವು ಭಾಗಗಳು ಸಂವಿಧಾನದ 14 ಮತ್ತು 29ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿರುವ ಮಹಾರಾಷ್ಟ್ರ ಸರ್ಕಾರ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಇಂದು ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ಮರಾಠಿ ಭಾಷಿಗರು ಕರ್ನಾಟಕದಲ್ಲಿ ನೆಲೆಸಿರುವ ಕೆಲವು ಭಾಗಗಳನ್ನು ಮಹಾರಾಷ್ಟ್ರದ ವ್ಯಾಪ್ತಿಗೆ ಸೇರಿಸಬೇಕು ಎಂದು ಕೋರಿ ಮಹಾರಾಷ್ಟ್ರ ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ನಡೆಸಲಿದೆ.

ರಾಜ್ಯ ಪುನರ್‌ ವಿಂಗಡಣಾ ಕಾಯಿದೆ 1956ರ ಸೆಕ್ಷನ್‌ 3,7 & 8 ರ ಅಡಿ ಕೆಲವು ಭಾಗಗಳು ಸಂವಿಧಾನದ 14 ಮತ್ತು 29ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಸಲ್ಲಿಸಿರುವ ಅಸಲು ದಾವೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌, ವಿ ರಾಮಸುಬ್ರಣಿಯನ್ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ.

ಮಹಾರಾಷ್ಟ್ರದ ದೂರಿನಲ್ಲಿ ಉಲ್ಲೇಖಿಸಿರುವ ಕೆಲವು ಪ್ರದೇಶ/ಗ್ರಾಮಗಳಲ್ಲಿ ಮರಾಠಿ ಮಾತನಾಡುವ ಜನರಿದ್ದು, ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ವಾದಿಸಲಾಗಿದೆ.

ತನ್ನ ರಾಜ್ಯದ ಗಡಿ ಬದಲಾವಣೆ ಕುರಿತು ಪ್ರಶ್ನಿಸುವುದಕ್ಕೆ ಭಾರತದಲ್ಲಿ ರಾಜ್ಯ ಸರ್ಕಾರಕ್ಕೆ ಕಾನೂನಾತ್ಮಕವಾದ ಹಕ್ಕು ಇಲ್ಲ. ಸಂವಿಧಾನದ 3ನೇ ವಿಧಿಯ ಅಡಿ ದೊರೆಯುವ ಶಾಸನಾತ್ಮಕ ಅಧಿಕಾರವು ರಾಜ್ಯ ಸರ್ಕಾರಕ್ಕೆ ಯಾವುದೇ ಹಕ್ಕನ್ನು ನೀಡುವುದಿಲ್ಲ. ಅಂಥ ಅಧಿಕಾರವನ್ನು ಚಲಾಯಿಸಿದ ಸಂದರ್ಭದಲ್ಲಿ ಸಂವಿಧಾನದ 3ನೇ ವಿಧಿಯ ಅಡಿ ರಾಜ್ಯದ ಸಮ್ಮತಿ ಅಥವಾ ಒಪ್ಪಿಗೆ ಪರಿಗಣಿಸಲಾಗುವುದಿಲ್ಲ, ಬದಲಿಗೆ ರಾಜ್ಯದ ದೃಷ್ಟಿಕೋನವನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಅರ್ಜಿಯ ಮಾನ್ಯತೆಯನ್ನು ಕರ್ನಾಟಕ ಸರ್ಕಾರವು ಪ್ರಶ್ನಿಸಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರವು ಸಂವಿಧಾನ ನಿರ್ಮಾತೃಗಳ ಭಾಷಣ ಮತ್ತು ಸರ್ಕಾರಿಯಾ ಆಯೋಗದ ವರದಿಯನ್ನು ಆಧರಿಸಿದೆ.

ಅಲ್ಲದೆ, ರಾಜ್ಯಗಳ ಪುನರ್‌ ವಿಂಗಡಣೆಗೆ ಕೇವಲ ನಾಗರಿಕರು ಆಡುವ ಭಾಷೆಯೊಂದನ್ನೇ ಆಧರಿಸಲಾಗಿಲ್ಲ. 1956ರ ಕಾಯಿದೆಯು ಆರ್ಥಿಕ, ವಾಣಿಜ್ಯಾತ್ಮಕ, ಆಡಳಿತಾತ್ಮಕ ಮುಂತಾದ ಅನೇಕ ಪರಿಗಣನೆಗಳನ್ನೂ ಸಹ ಒಳಗೊಂಡಿದೆ ಎಂದು ರಾಜ್ಯ ಸರ್ಕಾರವು ವಿವರಿಸಿದೆ.

ಪ್ರಕರಣದಲ್ಲಿ ಕೇಂದ್ರ ಗೃಹ ಇಲಾಖೆ ಮತ್ತು ಕರ್ನಾಟಕ ಸರ್ಕಾರವನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

Kannada Bar & Bench
kannada.barandbench.com