ಸುಪ್ರೀಂ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿಸುವ ಎಸ್‌ಸಿಬಿಎ ಸಲಹೆ: ಮಾಹಿತಿ ನೀಡಲು ಸುಪ್ರೀಂ ನಕಾರ

ಮಾಹಿತಿ ಹಕ್ಕು ಕಾಯಿದೆ 2005ರ ಸೆಕ್ಷನ್‌ಗಳಾದ 8(1)(ಇ) ಮತ್ತು 11(1) ಅನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
Supreme Court, RTI
Supreme Court, RTI

ಸುಪ್ರೀಂ ಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ಪದೋನ್ನತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ನೀಡಿರುವ ಸಲಹೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಶುಕ್ರವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಸುಪ್ರೀಂ ಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಸಂಬಂಧ ಎಸ್‌ಸಿಬಿಎ ಮೇ 31ರಂದು ಮಾಡಿದ್ದ ಮನವಿಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಒಪ್ಪಿಗೆ ಸೂಚಿಸಿದ್ದಾರೆ ಎಂದು ಎಸ್‌ಸಿಬಿಎ ಹೇಳಿಕೆಯಲ್ಲಿ ತಿಳಿಸಿತ್ತು.

ಆ ಸಂದರ್ಭದಲ್ಲಿ ಸಿಜೆಐ ಕಚೇರಿಯು ಅದನ್ನು ಖಾತರಿಪಡಿಸಿರಲಿಲ್ಲ. ಆದರೆ, ವಿಷಯಕ್ಕೆ ಸಂಬಂಧಿಸಿದಂತೆ ಎಸ್‌ಸಿಬಿಎ ಕಡೆಯಿಂದ ಪ್ರಸ್ತಾವನೆ ಸ್ವೀಕರಿಸಲಾಗಿದೆ ಎಂದಷ್ಟೇ ಹೇಳಿತ್ತು.

ಇದರ ಬೆನ್ನಿಗೇ, ವಕೀಲ ಅಮ್ರಿತ್‌ಪಾಲ್‌ ಸಿಂಗ್‌ ಖಾಲ್ಸಾ ಅವರು ಮಾಹಿತಿ ಹಕ್ಕಿನ ಅಡಿ ಎಸ್‌ಸಿಬಿಎ ಮೇ 31ರಂದು ಬರೆದಿರುವ ಪತ್ರದ ಪ್ರತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರ್ವೋಚ್ಚ ನ್ಯಾಯಾಲಯವು ಮಾಹಿತಿ ಹಕ್ಕು ಕಾಯಿದೆಯ (ಆರ್‌ಟಿಐ) ಕೆಲವು ನಿಬಂಧನೆಗಳನ್ನು ಉಲ್ಲೇಖಿಸಿ ಪ್ರತಿ ನೀಡಲು ನಿರಾಕರಿಸಿದೆ.

ಆರ್‌ಟಿಐ ಕಾಯಿದೆಯ ಸೆಕ್ಷನ್‌ಗಳಾದ 8(1)(ಇ) ಮತ್ತು 11(1) ಅನ್ನು ಪ್ರಸ್ತಾಪಿಸಿರುವ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್‌ ಮತ್ತು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು (ಸಿಪಿಐಒ) ಕೋರಲಾದ ಮಾಹಿತಿ ನೀಡಲಾಗದು ಎಂದು ಪ್ರತಿಕ್ರಿಯಿಸಿದ್ದಾರೆ.

ಆರ್‌ಟಿಐ ಕಾಯಿದೆಯ ಸೆಕ್ಷನ್‌ 8(1)(ಇ)ರ ಪ್ರಕಾರ ನಿರ್ದಿಷ್ಟ ಮಾಹಿತಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಎಂಬ ವಿಚಾರ ಸಕ್ಷಮ ಪ್ರಾಧಿಕಾರಕ್ಕೆ ಸಮಾಧಾನ ತರದಿದ್ದಲ್ಲಿ ಒಬ್ಬ ವ್ಯಕ್ತಿಯು ತನ್ನ ವಿಶ್ವಾಸಾರ್ಹ ಸಂಬಂಧದಡಿ ಬರುವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡುತ್ತದೆ. ಮೂರನೇ ವ್ಯಕ್ತಿಯಿಂದ ಮಾಹಿತಿ ಪಡೆಯುವಾಗ ಸೆಕ್ಷನ್‌ 11ಕ್ಕೆ ಪ್ರಾಮುಖ್ಯತೆ ಬರುತ್ತದೆ ಎಂದು ಹೇಳಲಾಗಿದೆ.

ಸಿಜೆಐಗೆ ಬರೆದಿರುವ ಸಿಎಸ್‌ಬಿಎ ಪತ್ರವಲ್ಲದೇ ಖಾಲ್ಸಾ ಅವರು ಕೆಳಗಿನ ದಾಖಲೆಗಳನ್ನು ಒದಗಿಸುವಂತೆಯೂ ಕೋರಿದ್ದರು.

  • ಎಸ್‌ಸಿಬಿಎ ಪ್ರಸ್ತಾವನೆಗೆ ಸಿಜೆಐ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಆದೇಶ, ಪತ್ರ ಅಥವಾ ಸಂವಹನ ದಾಖಲೆ.

  • ಎಸ್‌ಸಿಬಿಎ ಪ್ರಸ್ತಾವನೆಗೆ ಸಂಬಂಧಿಸಿದ ನಿಯಮ ಮತ್ತು ಷರತ್ತುಗಳು.

  • ಕಡತದ ಟಿಪ್ಟಣಿಗಳು

  • ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಜೆಐ ಕೋರಿಕೆಯ ಪತ್ರ.

  • ಹೆಸರು, ಹುದ್ದೆ ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರದ ಸಂಪರ್ಕ ವಿವರ.

ಮೇಲೆ ಕೇಳಲಾಗಿರುವ ಮಾಹಿತಿ ಪೂರೈಸಲು ಯಾವುದೇ ಅಧಿಕೃತ ದಾಖಲೆಯನ್ನು ಒಳಗೊಂಡ ಮಾಹಿತಿ ಲಭ್ಯವಿಲ್ಲ ಎಂದು ಸಿಪಿಐಒ ಹೇಳಿದ್ದಾರೆ.

Also Read
ಸುಪ್ರೀಂಕೋರ್ಟ್ ವಕೀಲರು ಹೆಚ್ಚು ಅರ್ಹರು ಹೇಳಿಕೆ: ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಸ್ಪಷ್ಟೀಕರಣ

ಸುಪ್ರೀಂ ಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ಪದೋನ್ನತಿ ನೀಡುವ ಸಂಬಂಧ ಎಸ್‌ಸಿಬಿಎ ಕಾರ್ಯಕಾರಿ ಸಮಿತಿಯು ಸಿಜೆಐ ರಮಣ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. “ಸಿಜೆಐ ಇದಕ್ಕೆ ಒಪ್ಪಿಕೊಂಡಿದ್ದು, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಇದನ್ನು ಪರಿಗಣಿಸುವಂತೆ ಪತ್ರ ಬರೆದಿದ್ದಾರೆ” ಎಂಬ ವಿಚಾರವನ್ನು ಎಸ್‌ಸಿಬಿಎ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು ಜೂನ್‌ 8ರ ಹೇಳಿಕೆಯಲ್ಲಿ ತಿಳಿಸಿದ್ದರು.

ಆ ಬಳಿಕ, ಎಸ್‌ಸಿಬಿಎ ಕಾರ್ಯಕಾರಿ ಸಮಿತಿಯು ಅರ್ಹ ಸುಪ್ರೀಂ ಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸಲುವಾಗಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಪಾವನಿ ಮತ್ತು ಹಿರಿಯ ವಕೀಲರಾದ ರಾಕೇಶ್‌ ದ್ವಿವೇದಿ, ಶೇಖರ್‌ ನಾಫಡೆ, ವಿಜಯ್‌ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಚಿಸಿತ್ತು.

ಎಸ್‌ಸಿಬಿಎ ಪ್ರಸ್ತಾವನೆಗೆ ದೆಹಲಿ ಹೈಕೋರ್ಟ್‌ ವಕೀಲರ ಸಂಘ, ಬೆಂಗಳೂರು ವಕೀಲರ ಸಂಘ, ಕಲ್ಕತ್ತಾ ಹೈಕೋರ್ಟ್‌ ವಕೀಲರ ಸಂಘಗಳು ವಿರೋಧ ದಾಖಲಿಸಿದ್ದವು.

Related Stories

No stories found.
Kannada Bar & Bench
kannada.barandbench.com