ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣ: ವಾಸುದೇವ್‌, ಅಮಿತ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ವಾಸುದೇವ ಭಗವಾನ್‌ ಸೂರ್ಯವಂಶಿ ಮತ್ತು ಅಮಿತ್‌ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
M M Kalburgi and Karnataka HC
M M Kalburgi and Karnataka HC
Published on

ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ವಾಸುದೇವ ಭಗವಾನ್‌ ಮತ್ತು ಅಮಿತ್‌ ಬದ್ದಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ವಾಸುದೇವ ಭಗವಾನ್‌ ಸೂರ್ಯವಂಶಿ ಮತ್ತು ಅಮಿತ್‌ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ “ಎರಡೂ ಹತ್ಯೆ ಪ್ರಕರಣಗಳಲ್ಲಿ ಅರ್ಜಿದಾರರ ವಿರುದ್ಧ ಬೈಕ್‌ ಕಳವು ಮಾಡಿ ಅದನ್ನು ಹತ್ಯೆಯ ಕೃತ್ಯಕ್ಕೆ ಬಳಸಿದವರಿಗೆ ನೀಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಆದರೆ, ಇವರ ವಿರುದ್ಧದ ಬೈಕ್‌ ಕಳವು ಪ್ರಕರಣ ಈಗಾಗಲೇ ಇತ್ಯರ್ಥವಾಗಿದೆ” ಎಂದು ವಿವರಿಸಿದರು.

“ಕಳೆದ ಆರೂವರೆ ವರ್ಷಗಳಿಂದ ಈ ಅರ್ಜಿದಾರರ ವಿಚಾರಣೆ ನಡೆದಿಲ್ಲ. ಒಟ್ಟು 138 ಸಾಕ್ಷಿಗಳಲ್ಲಿ ಈತನಕ ಕೇವಲ 10 ಸಾಕ್ಷಿಗಳನ್ನು ಮಾತ್ರವೇ ವಿಚಾರಣೆ ನಡೆಸಲಾಗಿದ್ದು ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠ ಜಾಮೀನು ಮಂಜೂರು ಮಾಡಿತು. ಪ್ರಾಸಿಕ್ಯೂಷನ್‌ ಪರ ಅಶೋಕ್ ನಾಯಕ್‌ ವಾದ ಮಂಡಿಸಿದರು.

ಪ್ರಕರಣದ ಹಿನ್ನೆಲೆ: 2015ರ ಆಗಸ್ಟ್‌ 30ರ ಬೆಳಿಗ್ಗೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಬಂದೂಕಿನಿಂದ ಧಾರವಾಡದ ತಮ್ಮ ನಿವಾಸದಲ್ಲಿದ್ದ ಎಂ ಎಂ ಕಲಬುರ್ಗಿ ಅವರ ಹಣೆಯ ಭಾಗಕ್ಕೆ ಶೂಟ್‌ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಲಬುರ್ಗಿ ಅವರು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅಸುನೀಗಿದ್ದರು.

Also Read
ಸಂಶೋಧಕ ಕಲಬುರ್ಗಿ ಕೊಲೆ ಪ್ರಕರಣ: ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸದ ಸರ್ಕಾರದ ನಡೆಗೆ ಹೈಕೋರ್ಟ್‌ ಅಸಮಾಧಾನ

ಈ ಸಂಬಂಧ ಆರೋಪಿಗಳ ವಿರುದ್ಧ ಧಾರವಾಡದ ವಿದ್ಯಾಗಿರಿಯ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 109, 449, 302, 201 ಮತ್ತು 35 ಜೊತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 25(1)(ಎ), 25(1)ಬಿ, 27(1) ಅಡಿ ಪ್ರಕರಣ ದಾಖಲಾಗಿದ್ದು, ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಈ ಮಧ್ಯೆ, ಪ್ರಾಸಿಕ್ಯೂಷನ್‌ ವಾಸುದೇವ್‌ ಸೂರ್ಯವಂಶಿಯು ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಅಮಿತ್‌ ಬದ್ದಿ ಆರೋಪಿಯಾಗಿದ್ದಾನೆ ಎಂದು ವಿಚಾರಣಾಧೀನ ನ್ಯಾಯಾಲಯದಲ್ಲಿ ಈ ಇಬ್ಬರ ಜಾಮೀನಿಗೆ ವಿರೋಧಿಸಿತ್ತು.

Kannada Bar & Bench
kannada.barandbench.com