ಶಾಲಾ ಕಟ್ಟಡ ಸುರಕ್ಷತಾ ನಿಯಮಾವಳಿ, ಖಾಸಗಿ ಶಾಲೆಗಳಿಗೆ ಅನ್ವಯಿಸುವ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯ: ಹೈಕೋರ್ಟ್‌

ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿಸ್ತೃತ ಕ್ರಿಯಾ ಯೋಜನೆ ರೂಪಿಸಬೇಕು ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವ ನಿಯಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಹೇಗೆ ಪಾಲನೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಯೋಜನೆಯೊಂದನ್ನು ಸಲ್ಲಿಸಬೇಕು ಎಂದಿರುವ ಹೈಕೋರ್ಟ್‌.
Karnataka High Court
Karnataka High Court
Published on

“ಅನುದಾನರಹಿತ ಶಾಲೆಗಳಿಗೆ ವಿಧಿಸಲಾಗಿರುವ ಕಟ್ಟಡ–ಅಗ್ನಿ ಸುರಕ್ಷತೆ ಸೇರಿದಂತೆ ಹಲವು ಷರತ್ತುಗಳ ಪಾಲನೆ ಹಾಗೂ ಈ ದಿಸೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸರ್ಕಾರಿ ಶಾಲೆಗಳೂ ಅಳವಡಿಸಿಕೊಳ್ಳಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಜೂನ್ 6ರಂದು ಹೊರಡಿಸಿದ್ದ ಸುತ್ತೋಲೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘಟನೆ (ಅವರ್ಸ್‌ ಸ್ಕೂಲ್ಸ್‌) ಕಾರ್ಯದರ್ಶಿ ಎನ್‌ ಪ್ರಭಾಕರ ಅರಸ್‌ ಸೇರಿದಂತೆ ಒಟ್ಟು 11 ವಿದ್ಯಾಸಂಸ್ಥೆ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

“ಶಾಲಾ ಕಟ್ಟಡ ಸುರಕ್ಷತಾ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸುತ್ತಿಲ್ಲ” ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಿರುವ ಪೀಠವು “ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಕೆಲವೊಂದು ನಿಯಮ, ನಿಬಂಧನೆ ಮತ್ತು ಷರತ್ತುಗಳನ್ನು ವಿಧಿಸಿದಾಗ ಅವುಗಳನ್ನು ರಾಜ್ಯ ಸರ್ಕಾರದ ಶಾಲೆಗಳೂ ಪಾಲನೆ ಮಾಡಬೇಕು” ಎಂದು ಹೇಳಿದೆ.

“ಶಾಲಾ ಕಟ್ಟಡ ಸುರಕ್ಷತಾ ನಿಯಮಾವಳಿ, ರಾಷ್ಟ್ರಿಯ ಕಟ್ಟಡ ಕೋಡ್‌ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯಿಸುವ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ವಿನಾಯಿತಿ ಇಲ್ಲ” ಎಂದು ಸ್ಪಷ್ಟಪಡಿರುವ ಪೀಠವು “ಶಿಕ್ಷಣ ಇಲಾಖೆ ಕಾರ್ಯದರ್ಶಿ ಈ ಸಂಬಂಧ ವಿಸ್ತೃತ ಕ್ರಿಯಾ ಯೋಜನೆ ರೂಪಿಸಬೇಕು ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವ ನಿಯಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಹೇಗೆ ಪಾಲನೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಯೋಜನೆಯೊಂದನ್ನು ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.

“ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳು ಈ ಕಟ್ಟಡ ಸುರಕ್ಷತಾ ನಿಯಮಗಳ ಪಾಲನೆ ಬಗೆಗಿನ ವಿವರಗಳನ್ನು ಅಪ್‌ಲೋಡ್‌ ಮಾಡಲು ಇಲಾಖೆ ಒಂದು ಪೋರ್ಟಲ್‌ ಅಭಿವೃದ್ಧಿಪಡಿಸಬೇಕು. ಈ ಪೋರ್ಟ್‌ಲ್‌ನಲ್ಲಿ ಎಲ್ಲಾ ಶಾಲೆಗಳು ನಿಯಮಗಳ ಪಾಲನೆ ಬಗೆಗಿನ ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕು ಮತ್ತು ಈ ಕುರಿತು ಶಿಕ್ಷಣ ಇಲಾಖೆ ಆರು ವಾರಗಳಲ್ಲಿ ನ್ಯಾಯಾಯಲಕ್ಕೆ ಕ್ರಿಯಾ ಯೋಜನೆ ಸಲ್ಲಿಸಬೇಕು” ಎಂದು ಪೀಠ ಆದೇಶಿಸಿದೆ.

“ಖಾಸಗಿ ಶಾಲೆಗಳು ಸಾಕಷ್ಟು ವರ್ಷಗಳಿಂದ ಶಿಕ್ಷಣ ಸೇವೆ ಒದಗಿಸುತ್ತಿವೆ. ಅವುಗಳ ಮೇಲೆ ಏಕಾಏಕಿ ಒತ್ತಡ ಹೇರಲಾಗದು. ಇಲಾಖೆ ಒಂದಷ್ಟು ಸಮಯಾವಕಾಶ ನೀಡಬೇಕಾಗುತ್ತದೆ. ಹಾಗಾಗಿ ಕಟ್ಟಡ ನಿಯಮ, ನಿಬಂಧನೆಗಳನ್ನು ಪಾಲನೆ ಮಾಡಲು ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ತನಕ ಕಾಲಾವಕಾಶ ನೀಡಲಾಗಿದೆ” ಎಂದು ಪೀಠ ತಿಳಿಸಿದೆ.

“ಖಾಸಗಿ ಶಾಲೆಗಳು ಎಲ್ಲಾ ಷರತ್ತುಗಳನ್ನು ಪಾಲನೆ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಶಿಕ್ಷಣ ಇಲಾಖೆ ಯಾವುದೇ ಕಾರ್ಯವಿಧಾನ ಹೊಂದಿಲ್ಲ” ಎಂಬ ಅಂಶವನ್ನು ಪ್ರಸ್ತಾಪಿಸಿರುವ ಪೀಠವು “ಕರ್ನಾಟಕ ಶಿಕ್ಷಣ ಕಾಯಿದೆ–1983ರ ಸೆಕ್ಷನ್ 36ರಡಿ ಶಾಲೆಗಳಿಗೆ ತಾತ್ಕಾಲಿಕ ಮಾನ್ಯತೆ ನೀಡಲಾಗಿದೆ. ಹಾಗಾಗಿ, ಒಂದು ವರ್ಷದೊಳಗೆ ನಿಯಮದಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಅಗತ್ಯಗಳನ್ನು ಪೂರೈಸಲೇಬೇಕು” ಎಂದು ತಾಕೀತು ಮಾಡಿದೆ.

“ಸುತ್ತೋಲೆ ಅನುಸಾರ ಶಾಲೆಗಳಿಗೆ ಅಂತಿಮ ಮಾನ್ಯತೆ ನೀಡುವ ಮುನ್ನವೇ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ಅದರ ಉದ್ದೇಶ ಶಾಲಾ ಕಟ್ಟಡಗಳಲ್ಲಿ ಬಿಲ್ಡಿಂಗ್‌ ಬೈಲಾ ಮತ್ತು ಇತರೆ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದಾಗಿದೆಯೇ ಹೊರತಾಗಿ ಇಲಾಖೆ ಮತ್ತಾವ ಹೊಸ ಷರತ್ತುಗಳನ್ನೇನೂ ವಿಧಿಸಿಲ್ಲ. ಹಾಲಿ ನಿಯಮಗಳಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದಷ್ಟೇ ಸೂಚಿಸಿದೆ. ಹಾಗಾಗಿ, ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಪ್ರಾಧಿಕಾರಗಳಿಂದ ಪಡೆದು ಸಲ್ಲಿಸುವ ಶಾಲೆಗಳ ನೋಂದಣಿ, ಮಾನ್ಯತೆ ಹಾಗೂ ಮಾನ್ಯತೆ ನವೀಕರಣವನ್ನು ನಿಯಮಾನುಸಾರ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2022ರ ಜೂನ್‌ 6ರಂದು ಹೊರಡಿಸಿದ್ದ ಸುತ್ತೋಲೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

Kannada Bar & Bench
kannada.barandbench.com