ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ) ನೇಮಕಾತಿ ಮಾಡಿದ್ದ 24,000 ಉದ್ಯೋಗಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ [ಪ. ಬಂಗಾಳ ಸರ್ಕಾರ ಮತ್ತು ಬೈಸಾಖಿ ಭಟಾಚಾರ್ಯ ಚಟರ್ಜಿ ಇನ್ನಿತರರ ನಡುವಣ ಪ್ರಕರಣ].
ತ್ವರಿತವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ಸಿಜೆಐ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಜುಲೈ 16ಕ್ಕೆ ಪ್ರಕರಣ ಪಟ್ಟಿ ಮಾಡಿತು.
ಸುಪ್ರೀಂ ಕೋರ್ಟ್ ನೀಡುತ್ತಿರುವ ತಡೆಯಾಜ್ಞೆಯಿಂದಾಗಿ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆ ಸ್ಥಗಿತಗೊಳ್ಳಲಿದೆಯೇ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆತಂಕ ವ್ಯಕ್ತಪಡಿಸಿದರು. ಆಗ ನ್ಯಾಯಾಲಯ ಪಶ್ಚಿಮ ಬಂಗಾಳ ಸರ್ಕಾರ ಅಧಿಕಾರಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದೆ ಸಿಬಿಐ ತನ್ನ ತನಿಖೆ ಮುಂದುವರೆಸಲು ಅನುಮತಿ ಇದೆ ಎಂದು ಸ್ಪಷ್ಟಪಡಿಸಿತು.
ಹೈಕೋರ್ಟ್ ನೇಮಕಾತಿ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು. ನೇಮಕಗೊಂಡಿರುವ ಅಭ್ಯರ್ಥಿಗಳು ಸಂಬಳ ಮರಳಿಸುವಂತೆ ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು.
ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ ಮತ್ತು ನೀರಜ್ ಕಿಶನ್ ಕೌಲ್ ಅವರು ಹೈಕೋರ್ಟ್ ನೇಮಕಾತಿಗಳನ್ನು ರದ್ದುಗೊಳಿಸುವುದರ ವಿರುದ್ಧ ವಾದ ಮಂಡಿಸಿದರು. ಹೈಕೋರ್ಟ್ ಕಡೆಯಿಂದಾಗಿರುವ ಲೋಪಗಳನ್ನು ಎತ್ತಿ ತೋರಿಸಿದ ಅವರು ಆದೇಶದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ವಿವರಿಸಿದರು.
ಡಬ್ಲ್ಯುಬಿಎಸ್‌ಎಸ್‌ಸಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಜೈದೀಪ್ ಗುಪ್ತಾ ಮತ್ತು ಸಂಜಯ್ ಹೆಗ್ಡೆ ಅವರು ಹೈಕೋರ್ಟ್ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿದರು. ನೇಮಕಗೊಂಡ ಶಿಕ್ಷಕರಿಗೆ ನೋಟಿಸ್ ಕೂಡ ಬಂದಿಲ್ಲ ಎಂದು ಹೆಗ್ಡೆ ಗಮನ ಸೆಳೆದರು.
ಹಿರಿಯ ವಕೀಲರಾದ ರಂಜಿತ್ ಕುಮಾರ್, ಶ್ಯಾಮ್ ದಿವಾನ್, ಪಿಎಸ್ ಪಟ್ವಾಲಿಯಾ, ದುಷ್ಯಂತ್ ದವೆ ಹಾಗೂ ಮಾಧವಿ ದಿವಾನ್ ಕೆಲಸ ಕಳೆದುಕೊಂಡ ಶಿಕ್ಷಕರ ಪರವಾಗಿ ವಾದ ಮಂಡಿಸಿದರು. ಅನುಭವಿ ಶಿಕ್ಷಕರ ನಷ್ಟ ಉಂಟಾಗಲಿದ್ದು ವ್ಯಕ್ತಿಗಳ ವೃತ್ತಿ ಮತ್ತು ಜೀವನೋಪಾಯದ ಮೇಲೆ ಹಾನಿಕಾರಕ ಪರಿಣಾಮ ಬೀರುವುದನ್ನು ಪ್ರಸ್ತಾಪಿಸಿದರು.
ಈ ಹಂತದಲ್ಲಿ ದವೆ ಅವರು ನೇಮಕಗೊಂಡ ಶಿಕ್ಷಕರ ನೇಮಕಾತಿ ರದ್ದುಗೊಳಿಸುವುದಾಗಿ ಸಾರ್ವಜನಿಕ ಸಂದರ್ಶನ ನೀಡಿದ್ದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ (ಈಗ ಅವರು ಸ್ವಯಂ ನಿವೃತ್ತಿ ಪಡೆದಿದ್ದು ಪ. ಬಂಗಾಳದ ತಮ್‌ಲುಕ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ) ಅವರು ಈ ಹಿಂದೆ ನೀಡಿದ್ದ ತೀರ್ಪಿನ ಪರಿಣಾಮ ಈ ಎಲ್ಲವೂ ಘಟಿಸಿದೆ ಎಂದು ಆಕ್ಷೇಪಿಸಿದರು. ಆದರೆ ದವೆ ಅವರು ಸಭ್ಯತೆಯ ಎಲ್ಲೆ ಮೀರದಂತೆ ಸಿಜೆಐ ಎಚ್ಚರಿಸಿದರು. ಒಂದು ಹಂತದಲ್ಲಿ ತಡೆಯಾಜ್ಞೆ ನೀಡುವುದಿಲ್ಲವೆಂದೂ ಎಚ್ಚರಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಆರೋಪ ಮಾಡುವುದರಿಂದ ಉಪಯೋಗವಿಲ್ಲ ಎಂದರು.
ಬಳಿಕ ಆದೇಶ ವಜಾಗೊಳಿಸುವ ಇಲ್ಲವೇ ತಡೆ ಹಿಡಿಯುವ ಉದ್ದೇಶಕ್ಕಾಗಿ ತಾನು ಸಾಕಷ್ಟು ವಾದ ಆಲಿಸಿದ್ದು ಆ ಪ್ರಕಾರ ಆದೇಶ ನೀಡುತ್ತಿರುವುದಾಗಿ ತಿಳಿಸಿತು.