
ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ) ನೇಮಕಾತಿ ಮಾಡಿದ್ದ 24,000 ಉದ್ಯೋಗಗಳನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ನೇಮಕಾತಿ ವೇಳೆ ಅಕ್ರಮ ಮತ್ತು ವಂಚನೆ ನಡೆದಿರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜೀವ್ ಕುಮಾರ್ ಅವರಿದ್ದ ಪೀಠ ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
"ನಾವು ವಾಸ್ತವಾಂಶಗಳನ್ನು ಪರಿಶೀಲಿಸಿದ್ದೇವೆ. ಅಕ್ರಮ ಮತ್ತು ವಂಚನೆಯಿಂದಾಗಿ ಸಂಪೂರ್ಣ ಆಯ್ಕೆ ಪ್ರಕ್ರಿಯೆ ಹಾಳಾಗಿದ್ದು ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆ ಬೆತ್ತಲಾಗಿವೆ. ಕಲ್ಕತ್ತಾ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ. ಕಳಂಕಿತ ಅಭ್ಯರ್ಥಿಗಳನ್ನು ವಜಾಗೊಳಿಸಬೇಕು. ಮೋಸ ಮತ್ತು ವಂಚನೆಯ ಪರಿಣಾಮವಾಗಿ ನೇಮಕಾತಿ ನಡೆದಿದೆ" ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಇದೇ ವೇಳೆ, ನೇಮಕಾತಿಯಿಂದ ಪಡೆದ ವೇತನವನ್ನು ಸಿಬ್ಬಂದಿ ಮರಳಿಸುವ ಅಗತ್ಯವಿಲ್ಲ ಎಂದಿರುವ ಪೀಠ ಹೊಸ ಆಯ್ಕೆ ಪ್ರಕ್ರಿಯೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಆದೇಶಿಸಿದೆ. ಅಲ್ಲದೆ, ಕಳಂಕರಹಿತ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಿಂದ ಸಡಿಲಿಕೆ ನೀಡಬಹುದು ಎಂತಲೂ ನ್ಯಾಯಾಲಯ ಹೇಳಿದೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರದ ಮೇಲ್ಮನವಿ ಸೇರಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು 126 ಮೇಲ್ಮನವಿಗಳು ದಾಖಲಾಗಿದ್ದವು.
ಹಿನ್ನೆಲೆ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕಕ್ಕಾಗಿ 2016 ರಲ್ಲಿ 24,000 ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಿತ್ತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯ ಮೌಲ್ಯಮಾಪನದಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಹೆಚ್ಚಿನ ಅಭ್ಯರ್ಥಿಗಳಿಗೆ ಒಎಂಆರ್ ಶೀಟ್‌ಗಳನ್ನು ತಪ್ಪಾಗಿ ಮೌಲ್ಯಮಾಪನ ಮಾಡುವ ಮೂಲಕ ಉದ್ಯೋಗ ನೀಡಲಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಆರೋಪಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್, ಏಪ್ರಿಲ್ 2024 ರಂದು ರಾಜ್ಯ ಅನುದಾನಿತ ಶಾಲೆಗಳ 24,000 ಉದ್ಯೋಗಿಗಳ (ಬೋಧಕ ಮತ್ತು ಬೋಧಕೇತರ) ನೇಮಕಾತಿಯನ್ನು ರದ್ದುಗೊಳಿಸಿತ್ತು. 23 ಲಕ್ಷ ಉತ್ತರ ಪತ್ರಿಕೆಗಳಲ್ಲಿ ಯಾವುದನ್ನು ಸೂಕ್ತ ರೀತಿಯಲ್ಲಿ ಮೌಲ್ಯಮಾಪನ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂಬ ಅಂಶವನ್ನು ಗಮನಿಸಿದ ಹೈಕೋರ್ಟ್ ಈ ಕಾರಣಕ್ಕೆ ಎಲ್ಲಾ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಆದೇಶಿಸಿತು.
ಅಲ್ಲದೆ, ನೇಮಕಾತಿಯನ್ನು ಅಮಾನ್ಯವೆಂದು ಪರಿಗಣಿಸಿ, ಆಯ್ಕೆಯಾದ ಎಲ್ಲ 24,000 ಅಭ್ಯರ್ಥಿಗಳು ತಾವು ಪಡೆದ ಸಂಬಳವನ್ನು ಹಿಂದಿರುಗಿಸುವಂತೆ ಆದೇಶಿಸಿತ್ತು
ಹಗರಣದಲ್ಲಿ ಭಾಗಿಯಾದ ಆರೋಪದಡಿ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಶಾಸಕರಾದ ಮಾಣಿಕ್ ಭಟ್ಟಾಚಾರ್ಯ, ಜಿಬನ್ ಕೃಷ್ಣ ಸಾಹಾ ಸೇರಿದಂತೆ ಹಲವರು ಜೈಲಿನಲ್ಲಿದ್ದಾರೆ. ಅಮಾನತುಗೊಂಡ ಟಿಎಂಸಿ ನಾಯಕರಾದ ಸಂತನು ಕುಂದು ಮತ್ತು ಕುಂತಲ್ ಘೋಷ್ ಕೂಡ ಕಂಬಿ ಎಣಿಸುತ್ತಿದ್ದಾರೆ.