ಶಾಲಾ ಉದ್ಯೋಗ ಹಗರಣ: ಅಭಿಷೇಕ್‌ ಬ್ಯಾನರ್ಜಿ ವಿರುದ್ಧದ ಸಿಬಿಐ, ಇ ಡಿ ತನಿಖೆಗೆ ತಡೆ ನೀಡಲು ಸುಪ್ರೀಂ ನಕಾರ

ಆದಾಗ್ಯೂ, ಕಲ್ಕತ್ತಾ ಹೈಕೋರ್ಟ್‌ ವಿಧಿಸಿರುವ ₹25 ಲಕ್ಷ ದಂಡವನ್ನು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠವು ತಡೆ ಹಿಡಿಯಿತು.
Abhishek Banerjee
Abhishek BanerjeeFacebook
Published on

ಪಶ್ಚಿಮ ಬಂಗಾಳದಲ್ಲಿನ ಶಾಲಾ ಉದ್ಯೋಗಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್‌ ವಿಧಿಸಿರುವ ₹25 ಲಕ್ಷ ದಂಡದ ಮೊತ್ತಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯ (ಇ ಡಿ) ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ತಡೆ ವಿಧಿಸಲು ನಿರಾಕರಿಸಿದೆ.

ದಂಡ ವಿಧಿಸಿರುವುದನ್ನು ಹೊರತುಪಡಿಸಿ, ಇ ಡಿ ಮತ್ತು ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿರುವುದರಲ್ಲಿ ಮೇಲ್ನೋಟಕ್ಕೆ ಯಾವುದೇ ತಪ್ಪು ಕಾಣುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಆದೇಶಿಸಿತು.

ಹೀಗಾಗಿ, ಕಲ್ಕತ್ತಾ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿರುವ ಸರ್ವೋಚ್ಚ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದೆ.

Also Read
ಶಿಕ್ಷಕರ ಉದ್ಯೋಗ ಹಗರಣ: ಟಿಎಂಸಿಯ ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಜಾ; ₹25 ಲಕ್ಷ ದಂಡ ವಿಧಿಸಿದ ಕಲ್ಕತ್ತಾ ಹೈಕೋರ್ಟ್‌

ಪಶ್ಚಿಮ ಬಂಗಾಳದಲ್ಲಿನ ಶಿಕ್ಷಕರ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇ ಡಿ) ತನಿಖೆಗೆ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರ ಏಕಸದಸ್ಯ ಪೀಠವು ಆದೇಶ ಮಾಡಿರುವುದನ್ನು ಹಿಂಪಡೆಯುವಂತೆ ಕೋರಿ ತೃಣಮೂಲ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಕಲ್ಕತ್ತಾ ಹೈಕೋರ್ಟ್‌ನ ನ್ಯಾ. ಅಮೃತಾ ಸಿನ್ಹಾ ಅವರ ನೇತೃತ್ವದ ಏಕಸದಸ್ಯ ಪೀಠವು ಅವರಿಗೆ ಬರೋಬ್ಬರಿ ₹25 ಲಕ್ಷ ದಂಡ ವಿಧಿಸಿತ್ತು. ಇದೇ ಪ್ರಕರಣದಲ್ಲಿ ಬಂಧಿತ ಕುಂತಾಲ್‌ ಘೋಷ್‌ ಅವರಿಗೂ ಹೈಕೋರ್ಟ್‌ ₹25 ಲಕ್ಷ ದಂಡ ವಿಧಿಸಿತ್ತು.

Kannada Bar & Bench
kannada.barandbench.com