ಪತ್ನಿ, ಪುತ್ರಿಯ ಹೊಣೆ ನಿರಾಕರಿಸಿದ ಶಾಲಾ ಶಿಕ್ಷಕ: ಡಿಎನ್‌ಎ ಪರೀಕ್ಷೆ ನಿರ್ಣಾಯಕ ಎಂದ ಹೈಕೋರ್ಟ್‌

ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪರಿಷ್ಕರಣಾ ಪ್ರಕ್ರಿಯೆಗಳಲ್ಲಿ ಡಿಎನ್‌ಎ ಪರೀಕ್ಷೆಯ ನಿರ್ದೇಶನ ನೀಡುವ ಅಧಿಕಾರ ಹೊಂದಿಲ್ಲ ಎಂಬ ವಾದವನ್ನು ಹೈಕೋರ್ಟ್‌ ಸಾರಾಸಗಟಾಗಿ ತಳ್ಳಿಹಾಕಿದೆ.
Karnataka HC (Kalaburgi Bench) and DNA Test
Karnataka HC (Kalaburgi Bench) and DNA Test
Published on

ಪಿತೃತ್ವ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸಲು ಈಚೆಗೆ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಮಹಿಳೆ ತನ್ನ ಹೆಂಡತಿಯಲ್ಲ ಮತ್ತು ಆಕೆಯ ಮಗಳು ತನ್ನ ಪುತ್ರಿಯಲ್ಲ ಎಂದು ಶಾಲಾ ಶಿಕ್ಷಕರೊಬ್ಬರು ವಾದಿಸಿರುವ ಹಿನ್ನೆಲೆಯಲ್ಲಿ ವ್ಯಾಜ್ಯ ಬಗೆಹರಿಸಲು ಡಿಎನ್‌ಎ ಪರೀಕ್ಷೆ ನಿರ್ಣಾಯಕವಾಗಿದೆ ಎಂದು ಆದೇಶಿಸಿದೆ.

ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತೆ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿಯ ಶಾಲಾ ಶಿಕ್ಷಕ ಚಿದಾನಂದ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Sachin Shankar Magadum
Justice Sachin Shankar Magadum

ಮದುವೆ ಮತ್ತು ಪಿತೃತ್ವದಂತಹ ಮೂಲಭೂತ ಸಂಗತಿಗಳು ವಿವಾದಕ್ಕೊಳಗಾದಾಗ, ಪರಿಣಾಮಕಾರಿ ತೀರ್ಪು ನೀಡಲು ಮೇಲ್ಮನವಿ ನ್ಯಾಯಾಲಯವು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಡಿಎನ್‌ಎ ಪರೀಕ್ಷಾ ಆದೇಶವು ಚಿದಾನಂದ್‌ ಎತ್ತಿರುವ ವಿವಾದಗಳನ್ನು ನಿರ್ಣಾಯಕವಾಗಿ ಪರಿಹರಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ, ಆ ಆದೇಶ ಯಾವುದೇ ಪೂರ್ವಾಗ್ರಹ ಪೀಡಿತವಾಗಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪರಿಷ್ಕರಣಾ ಪ್ರಕ್ರಿಯೆಗಳಲ್ಲಿ ಡಿಎನ್‌ಎ ಪರೀಕ್ಷೆಯ ನಿರ್ದೇಶನ ನೀಡುವ ಅಧಿಕಾರ ಹೊಂದಿಲ್ಲ ಎಂಬ ಚಿದಾನಂದ್‌ ಅವರ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ನ್ಯಾಯಾಲಯವು ಆ ಆದೇಶದಿಂದ ಅರ್ಜಿದಾರರಿಗೆ ಪ್ರಯೋಜನಕಾರಿಯಾಗಿದೆ ಮತ್ತು ವಿವಾದಿತ ವಾಸ್ತವಿಕ ಸಮಸ್ಯೆಗಳನ್ನು ಪರಿಹರಿಸಲು ಡಿಎನ್‌ಎ ಪರೀಕ್ಷೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ.

ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು  ಉಲ್ಲೇಖಿಸಿರುವ ನ್ಯಾಯಾಲಯವು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 125ರ ಅಡಿಯಲ್ಲಿ, ಪತಿಯು ವೈವಾಹಿಕ ಸಂಬಂಧ ಅಥವಾ ಮಗುವಿನ ಪಿತೃತ್ವದ ಬಗ್ಗೆ ಪ್ರಶ್ನೆ ಎತ್ತಿದ ಸಂದರ್ಭದಲ್ಲಿ ನ್ಯಾಯಾಲಯವು ಡಿಎನ್‌ಎ ಪರೀಕ್ಷೆಗೆ ಆದೇಶಿಸುವ ಅಧಿಕಾರವನ್ನು ಹೊಂದಿದೆ. ಡಿಎನ್‌ಎ ಪ್ರೊಫೈಲಿಂಗ್‌ನಂತಹ ವೈಜ್ಞಾನಿಕ ಪುರಾವೆಗಳು ಲಭ್ಯವಿದ್ದಾಗ, ನ್ಯಾಯಾಲಯವು ಸತ್ಯದ ಕಣ್ಣು ಮುಚ್ಚುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಜೀವನಾಂಶದ ವಿಚಾರವಾಗಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 2025ರ ಜುಲೈ 10ರಂದು ಪುರಸ್ಕರಿಸಿದ್ದ ವಿಜಯಪುರದ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಹಿಳೆಯನ್ನು ತನ್ನ ಹೆಂಡತಿಯಲ್ಲ ಮತ್ತು ಬಾಲಕಿ ತನ್ನ ಮಗಳಲ್ಲ ಎಂದು ಚಿದಾನಂದ್ ಹೇಳಿಕೊಂಡಿದ್ದರಿಂದ ಡಿಎನ್‌ಎ ಪರೀಕ್ಷೆಗೆ ಒಳಗಾಗುವಂತೆ ಚಿದಾನಂದ್‌ಗೆ ನಿರ್ದೇಶಿಸಿತ್ತು.

ಅದಕ್ಕೂ ಮೊದಲು, ಸಿಆರ್‌ಪಿಸಿ ಸೆಕ್ಷನ್‌ 125ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ, ಮಹಿಳೆ ಮತ್ತು ಮಗು ಇಬ್ಬರೂ ಹಕ್ಕುದಾರರಿಗೆ ಮಾಸಿಕ 5 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ಚಿದಾನಂದ್‌ಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಚಿದಾನಂದ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

Attachment
PDF
Chidanand Vs Lakkavva
Preview
Kannada Bar & Bench
kannada.barandbench.com