[ಅಗ್ನಿ ಸುರಕ್ಷತೆ] ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ: ಹೈಕೋರ್ಟ್‌

ಶಾಲಾ ಕಟ್ಟಡವಿದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಶಾಲೆಯಲ್ಲಿ ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಾಂಪೌಂಡ್‌ ಇಲ್ಲ. ಇದಕ್ಕಾಗಿ ಅಗ್ನಿ ಸುರಕ್ಷತಾ ಅಫಿಡವಿಟ್‌ ನೀಡಲಾಗಿಲ್ಲ ಎಂದಿರುವ ನ್ಯಾಯಾಲಯ.
High Court of Karnataka
High Court of Karnataka

“ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಗ್ನಿ ಸುರಕ್ಷತಾ ಅಫಿಡವಿಟ್‌ ಪಡೆಯದೆ ಶಾಲೆ ನಡೆಸುವ ಮೂಲಕ ಮಕ್ಕಳ ಜೀವದ ಜತೆ ಆಟವಾಡುವುದಕ್ಕೆ ಅವಕಾಶ ನೀಡಲಾಗದು” ಎಂದು ಖಾಸಗಿ ಶಾಲೆಯೊಂದರ ವಿರುದ್ಧ ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶ್ರೀ ಆದಿಶಕ್ತಿ ಸೇವಾ ಟ್ರಸ್ಟ್‌ ನಡೆಸುತ್ತಿರುವ ಶಾಲೆಯೊಂದು ಸಲ್ಲಿಸಿದ್ದ ಸಿವಿಲ್​ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್​ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಶಾಲಾ ಕಟ್ಟಡವಿದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಶಾಲೆಯಲ್ಲಿ ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಾಂಪೌಂಡ್‌ ಇಲ್ಲ. ಹೀಗಿರುವಾಗಿ ಹೇಗೆ ಶಾಲೆ ನಡೆಸುವುದಕ್ಕೆ ಸಾಧ್ಯ” ಎಂದು ಪ್ರಶ್ನಿಸಿರುವ ಹೈಕೋರ್ಟ್, “ಇದೇ ಕಾರಣದಿಂದ ಶಾಲೆ ಮೇಲ್ದರ್ಜೆಗೇರಿಸಲು ಅವಕಾಶ ನೀಡಿಲ್ಲ. ಸರ್ಕಾರದ ಪ್ರಾಧಿಕಾರಗಳ ಕ್ರಮದಲ್ಲಿ ಯಾವುದೇ ದುರುದ್ದೇಶ ಅಡಗಿಲ್ಲ” ಎಂದಿದೆ.

“ಶಾಲೆಯ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಏಕಸದಸ್ಯ ಪೀಠ ಆದೇಶಿಸಿದೆ. ಆದರೆ, ಯಾವುದೇ ಸೌಲಭ್ಯ ಇಲ್ಲದೆ ಅನುಮತಿ ನೀಡುವಂತೆ ಕೋರುವುದು ಸರಿಯಾದ ಕ್ರಮವಲ್ಲ. ಶಾಲೆ ಕಟ್ಟಡದ ಸ್ಥಳವನ್ನು ಪರಿವರ್ತನೆ ಮಾಡಿಲ್ಲ. ಶಾಲೆಯನ್ನು ಮೇಲ್ದರ್ಜೆಗೆ ಏರಿಸಲು ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಸರ್ಕಾರದ ಪ್ರಾಧಿಕಾರಗಳು ತಿಳಿಸಿರುವ ಕ್ರಮ ಸರಿಯಾಗಿದೆ. ಜೊತೆಗೆ, ಏಕಸದಸ್ಯ ಪೀಠದ ಆದೇಶವನ್ನು ಸರ್ಕಾರದ ಪ್ರಾಧಿಕಾರಗಳು ಉದ್ದೇಶಪೂರ್ವಕವಾಗಿ ಜಾರಿ ಮಾಡಿಲ್ಲ ಎಂಬ ಆರೋಪವನ್ನು ಒಪ್ಪಲಾಗದು” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಶಾಲೆಯನ್ನು ಮೇಲ್ದರ್ಜೆಗೇರಿಸಲು ಭೂ ಪರಿವರ್ತನೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಹಾಗಿದ್ದರೂ, ಏಕಸದಸ್ಯ ಪೀಠದ ಆದೇಶವನ್ನು ಪಾಲನೆ ಮಾಡಿಲ್ಲ ಎಂಬುದಾಗಿ ಊಹೆಗಳ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ ಪೀಠ ಅರ್ಜಿಯನ್ನು ವಜಾಗೊಳಿಸಿತು. ಶಿಕ್ಷಣ ಇಲಾಖೆ ಕೇಳಿರುವ ಎಲ್ಲ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು ಎಂದು ಆದೇಶಲ್ಲಿ ನ್ಯಾಯಾಲಯ ತಿಳಿಸಿದೆ.

Kannada Bar & Bench
kannada.barandbench.com