ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಇತರೆ ಹಿಂದುಳಿದ ವರ್ಗಗಳಡಿ (ಒಬಿಸಿ) ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ [ಎಲ್ ಗುಲಾಮ್ ರಸೂಲ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠಕ್ಕೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ, ಧರ್ಮದ ಆಧಾರದ ಮೇಲೆ ಮೀಸಲಾತಿ ಒದಗಿಸುವುದು ಅಸಾಂವಿಧಾನಿಕವಾಗಿರುವುದರಿಂದ ಯಾವ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ʼಅಪ್ರಸ್ತುತʼವಾಗುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.
ಅಫಿಡವಿಟ್‌ನ ಪ್ರಮುಖಾಂಶಗಳು
ಧರ್ಮದ ಆಧಾರದ ಮೇಲೆ ಈ ಹಿಂದೆ ಮೀಸಲಾತಿಯನ್ನು ಒದಗಿಸಲಾಗಿದೆ ಎಂಬ ಒಂದೇ ಕಾರಣವು ಅದನ್ನು ಶಾಶ್ವತವಾಗಿ ಮುಂದುವರಿಸಲು ಸಮರ್ಥನೆಯಾಗದು. ಅದರಲ್ಲಿಯೂ ಅದರ ಹಿಂದಿನ ತತ್ವವು ಅಸಾಂವಿಧಾನಿಕವಾಗಿರುವಾಗ ಅದನ್ನು ಮುಂದುವರೆಸಲು ಸಾಧ್ಯವಿಲ್ಲ.
ಸಾಮಾಜಿಕ ನ್ಯಾಯದ ಪರಿಕಲ್ಪನೆಯು ಸಮಾಜದೊಳಗೆ ವಂಚಿತ ಮತ್ತು ತಾರತಮ್ಯಕ್ಕೆ ಒಳಗಾದವರನ್ನು ರಕ್ಷಿಸುವ ಗುರಿ ಇರಿಸಿಕೊಂಡಿದ್ದು ಈ ವ್ಯಾಪ್ತಿಯೊಳಗೆ ಇಡೀ ಧರ್ಮವನ್ನು ಸೇರಿಸುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾಗುತ್ತದೆ.
ಯಾವ ಗುಂಪು ಹಿಂದುಳಿದ ವರ್ಗಕ್ಕೆ ಸೇರಿದೆ ಎಂಬುದನ್ನು ನಿರ್ಧರಿಸುವುದು ಸಂಪೂರ್ಣವಾಗಿ ಕಾರ್ಯಾಂಗದ ಕೆಲಸ.
ಮುಸ್ಲಿಂ ಸಮುದಾಯವು ಈಗಾಗಲೇ ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್) ಅಡಿಯಲ್ಲಿ ಶೇ.10ರಷ್ಟು ಮೀಸಲಾತಿ ಪಡೆಯಲು ಅರ್ಹವಾಗಿದೆ. ಹೀಗಾಗಿ ಮುಸ್ಲಿಮರಿಗೆ ಒದಗಿಸಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ವೀರಶೈವ ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ವಿತರಿಸಬೇಕಿದೆ.
ಕೇಂದ್ರ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಒಟ್ಟಾರೆಯಾಗಿ ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿ ನೀಡಿಲ್ಲ.
ಕೇರಳ ರಾಜ್ಯ ಮತ್ತು ಕರ್ನಾಟಕದಲ್ಲಿ ಇತ್ತೀಚಿನವರೆಗೂ ನೀಡುತ್ತಿದ್ದುದನ್ನು ಹೊರತುಪಡಿಸಿದರೆ ದೇಶದಾದ್ಯಂತ, ಇಡೀ ಮುಸ್ಲಿಂ ಸಮುದಾಯಕ್ಕೆಯಾವುದೇ ರಾಜ್ಯ ಮೀಸಲಾತಿ ಒದಗಿಸಿಲ್ಲ.
ಮುಸ್ಲಿಂ ಧರ್ಮದ ವಿವಿಧ ಸಮುದಾಯಗಳಿಗೆ ಎಸ್‌ಇಬಿಸಿಯಡಿ ಮೀಸಲಾತಿ ಒದಗಿಸಲಾಗಿದೆ. ಇದು ಕರ್ನಾಟಕದಲ್ಲಿಯೂ ಮುಂದುವರೆಯಲಿದೆ.