ಮಾಜಿ ಕಾರ್ಪೊರೇಟ್‌ ಜಾತಿ ನಿಂದನೆ ಪ್ರಕರಣದಲ್ಲಿ ಆರೋಪ ಮುಕ್ತರಾದ ಬಿಜೆಪಿ ಶಾಸಕ ಮುನಿರತ್ನ

ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಪ್ರಕರಣ ದಾಖಲಾಗಬೇಕಾದರೆ ಜಾತಿ ನಿಂದನೆಯು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು ಎಂಬುದಾಗಿದೆ. ಆದರೆ, ಈ ಬೆಳವಣಿಗೆ ಸಾರ್ವಜನಿಕ ಸ್ಥಳದಲ್ಲಿ ನಡೆದಿಲ್ಲ ಎಂದಿರುವ ನ್ಯಾಯಾಲಯ.
BJP MLA Munirathna and Bengaluru City Civil Court
BJP MLA Munirathna and Bengaluru City Civil Court
Published on

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ದೌರ್ಜನ್ಯ ತಡೆ ಕಾಯಿದೆ ಅಡಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಆರೋಪ ಮುಕ್ತಗೊಳಿಸಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಆದೇಶಿಸಿದೆ.

ಪ್ರಕರಣ ಸಂಬಂಧ ದಾಖಲಾಗಿದ್ದ ಆರೋಪ ಪಟ್ಟಿಯಿಂದ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಮುನಿರತ್ನ ಅಲಿಯಾಸ್‌ ಮುನಿರತ್ನ ನಾಯ್ಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Judge Santosh Gajanan Bhat
Judge Santosh Gajanan Bhat

2024 ಮೇ 18ರಂದು ಮುನಿರತ್ನ ಮನೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಗುತ್ತಿಗೆದಾರರ ಸಭೆ ನಡೆದಿದ್ದು, ಆ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್‌ ವೇಲು ನಾಯ್ಕರ್‌ಗೆ ಜಾತಿ ನಿಂದನೆ ಮಾಡಲಾಗಿದೆ. ಇದು ಆಪಲ್‌ ವಾಚಿನಲ್ಲಿ ರೆಕಾರ್ಡ್‌ ಆಗಿದ್ದು, 2024ರ ಸೆಪ್ಟಂಬರ್‌ 13ರಂದು ದೂರುದಾರರಿಗೆ ಈ ವಿಚಾರ ತಿಳಿದು ದೂರು ದಾಖಲಿಸಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಪ್ರಕರಣ ದಾಖಲಾಗಬೇಕಾದರೆ ಜಾತಿ ನಿಂದನೆಯು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು ಎಂಬುದಾಗಿದೆ. ಆದರೆ, ಈ ಬೆಳವಣಿಗೆ ಸಾರ್ವಜನಿಕ ಸ್ಥಳದಲ್ಲಿ ನಡೆದಿಲ್ಲ. ಘಟನೆ ನಡೆದ ಹಲವು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದ್ದು, ಆರೋಪಿ ಮುನಿರತ್ನ ಅವರನ್ನು ಆರೋಪ ಮುಕ್ತಗೊಳಿಸಲಾಗುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಅರ್ಜಿದಾರರ ವಿರುದ್ಧದ ಆರೋಪಗಳು ಅನುಮಾನಕ್ಕೆ ಕಾರಣವಾಗುತ್ತಿದೆ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳಿಂದ ಆರೋಪವನ್ನು ಸಾಬೀತುಪಡಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಮುನಿರತ್ನ ಅವರಿಂದ ಜಾತಿ ನಿಂದನೆ ನಡೆದ ಸಂದರ್ಭದಲ್ಲಿ ದೂರುದಾರ ವೇಲು ನಾಯ್ಕರ್ ಸ್ಥಳದಲ್ಲೇ ಹಾಜರಿರಲಿಲ್ಲ.  ನ್ಯಾಯಾಲಯವು ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಡಿ ಅಪರಾಧ ಸಾಬೀತಾಗಬೇಕಾದರೆ ಜಾತಿ ನಿಂದನೆ ಸಾರ್ವಜನಿಕರು ನೋಡುವಂತಹ ಸ್ಥಳದಲ್ಲಿ ನಡೆಯಬೇಕು ಹಾಗೂ ಅವಮಾನಕ್ಕೊಳಗಾದ ವ್ಯಕ್ತಿಯೂ ಅಲ್ಲಿ ಹಾಜರಿರಬೇಕು ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಆ ಎರಡೂ ಅಂಶಗಳು ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ ಐಪಿಸಿ ಸೆಕ್ಷನ್‌ 504 ಮತ್ತು 506ರ ಅಡಿ ದಾಖಲಿಸಲಾಗಿದ್ದ ಉದ್ದೇಶಪೂರ್ವಕ ಅವಮಾನ ಹಾಗೂ ಜೀವ ಬೆದರಿಕೆ ಆರೋಪಗಳಿಗೂ ಅಗತ್ಯ ಅಂಶಗಳು ದಾಖಲೆಗಳಲ್ಲಿ ಕಾಣುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ದೂರುದಾರರಿಗೆ ಘಟನೆಯ ಮಾಹಿತಿ ಸುಮಾರು ನಾಲ್ಕು ತಿಂಗಳ ಬಳಿಕ ತಿಳಿದಿರುವುದರಿಂದ ಭಯ ಅಥವಾ ಆತಂಕ ಉಂಟುಮಾಡುವ ಉದ್ದೇಶ ಸಾಬೀತಾಗುವುದಿಲ್ಲ ಎಂದು ಹೇಳಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಮುನಿರತ್ನ ಅವರ ಕ್ಷೇತ್ರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಅಲ್ಲದೆ ಪ್ರತಿ ತಿಂಗಳ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ನಡುವೆ ದೂರುದಾರ ವೇಲು ನಾಯ್ಕರ್‌ ಅವರು ಅಲ್ಲಿನ ಗುತ್ತಿಗೆದಾರ ಚಲವರಾಜು ಅವರಿಗೆ ಲಂಚ ನೀಡದಂತೆ ಒತ್ತಡ ಹಾಕಿದ್ದರು. ಇದರಿಂದ ವೇಲುನಾಯ್ಕರ್‌ ವಿರುದ್ಧ ಮುನಿರತ್ನ ಕೋಪಗೊಂಡಿದ್ದರು. ಈ ನಡುವೆ ಗುತ್ತಿಗೆದಾರರೊಂದಿಗೆ ನಡೆದ ಸಭೆಯ ಬಳಿಕ  ವೇಲುನಾಯ್ಕರ್‌ ಅವರ ಜಾತಿಯನ್ನು ಬಳಸಿ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದರು ಎಂದು ಆರೋಪಿಸಿ ಮನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

Also Read
ಶಾಸಕ ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಸ್‌ಐಟಿಯಿಂದ ಬಿ ರಿಪೋರ್ಟ್‌ ಸಲ್ಲಿಕೆ; ಅರ್ಜಿಗಳು ವಜಾ

ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಮುನಿರತ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯಲ್ಲಿ, ಗುತ್ತಿಗೆದಾರರ ಸಭೆಯ ವೇಳೆ ಮುನಿರತ್ನ ಅವರು ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಕುರಿತು ಜಾತಿ ನಿಂದನೆ ಮಾಡಿದ್ದಾರೆ ಹಾಗೂ ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಈ ಅಂಶ ಮೊಬೈಲ್ ನಲ್ಲಿ ರೆಕಾರ್ಡ್‌ ಆಗಿತ್ತು ಎಂದು ತನಿಖಾಧಿಕಾರಿಗಳು ವಿವರಿಸಿದ್ದರು. ಇದರಿಂದ ಪ್ರಕರಣದಲ್ಲಿ ತಮ್ಮನ್ನು ಆರೋಪ ಮುಕ್ತರನ್ನಾಗಿಸಲು ಕೋರಿ ಅರ್ಜಿ ಸಲ್ಲಿಸಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸಿ ಎಸ್‌ ಪ್ರದೀಪ್‌, ಮುನಿರತ್ನ ಪರವಾಗಿ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಾದಿಸಿದ್ದರು.

Attachment
PDF
SIT Vs Munirathna
Preview
Kannada Bar & Bench
kannada.barandbench.com