ಎಸ್‌ಡಿಎ ಅನಧಿಕೃತ ಗೈರು; ಶಿಸ್ತುಕ್ರಮ ಜಾರಿ ಮಾಡದಿದ್ದರಿಂದ ವೇತನ ಪಾವತಿಸಲು ಮುಖ್ಯ ಶಿಕ್ಷಕರಿಗೆ ಹೈಕೋರ್ಟ್‌ ಆದೇಶ

ಅನಧಿಕೃತವಾಗಿ ಗೈರಾಗಿದ್ದ ಅವಧಿಗೆ ಶಿಸ್ತುಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಉದ್ಯೋಗಿಯು ಅನಧಿಕೃತವಾಗಿ ಗೈರಾಗಿದ್ದಾರೆ ಎಂದು ತೀರ್ಮಾನಿಸಲಾಗದು. ಉದ್ಯೋಗಿಯು ಸೇವೆಯಲ್ಲಿ ಮುಂದುವರಿಯುವವರೆಗೆ, ವೇತನ ಪಡೆಯಲು ಅರ್ಹರಾಗಿರುತ್ತಾರೆ.
Karnataka High Court
Karnataka High Court
Published on

ಶಾಲೆಯೊಂದರ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಒಂದು ವರ್ಷ ಕಾಲ ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆತನ ವಿರುದ್ಧ ಯಾವುದೇ ರೀತಿಯ ಶಿಸ್ತುಕ್ರಮ ಜರುಗಿಸದ್ದನ್ನು ಪರಿಣಿಸಿರುವ ಕರ್ನಾಟಕ ಹೈಕೋರ್ಟ್, ನೌಕರ ಗೈರಾಗಿದ್ದ ಅವಧಿಗೆ ವೇತನ ಪಾವತಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶಿಸಿದೆ.

ಎಸ್‌ಡಿಎ ಎನ್ ಎಸ್ ಕಾಂತರಾಜು ಅನಧಿಕೃತವಾಗಿ ರಜೆ ಹಾಕಿದ್ದ ಅವಧಿಗೆ ವೇತನ ಪಾವತಿಸಲು ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ನಗರದ ದೊಡ್ಡಬೊಮ್ಮಸಂದ್ರದ ಶ್ರೀರಾಘವೇಂದ್ರ ಆಶ್ರಮ ಶಾಲೆಯ ಮುಖ್ಯ ಶಿಕ್ಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿ, ಆದೇಶ ಮಾಡಿದೆ.

ಬೆಂಗಳೂರಿನ ಭಗಿನಿ ನಿವೇದಿತಾ ಪ್ರೌಢಶಾಲೆಯ ಎಸ್‌ಡಿಎ ಕಾಂತರಾಜು ಅವರನ್ನು ಶಿಕ್ಷಣ ಇಲಾಖೆಯು 2009ರಲ್ಲಿ ಶ್ರೀ ರಾಘವೇಂದ್ರ ಆಶ್ರಮ ಶಾಲೆಗೆ ವರ್ಗಾಯಿಸಿತ್ತು. ಆ ಶಾಲೆಯಲ್ಲಿ 2009ರ ಫೆಬ್ರವರಿ 2ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಕಾಂತರಾಜು ಅವರು ನಂತರದ ಒಂದು ವರ್ಷ ಕಾಲ (2009ರ ಫೆಬ್ರವರಿ 2ರಿಂದ 2010ರ ಫೆಬ್ರವರಿ 15ರವರೆಗೆ) ಗೈರಾಗಿದ್ದರು. ಬಳಿಕ ಉದ್ಯೋಗಕ್ಕೆ ಮರಳಿದ್ದರು.

2014ರ ಮಾರ್ಚ್‌ 14 ಮತ್ತು ಸೆಪ್ಟೆಂಬರ್‌ 30ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದ ಕಾಂತರಾಜು ಅವರು 2009ರ ಫೆಬ್ರವರಿ 2ರಿಂದ 2020ರ ಫೆಬ್ರವರಿ 15ರವರೆಗೆ ನಾನು ರಜೆಯ ಮೇಲೆ ತೆರಳಿದ್ದೆ. ಆದರೆ, ನಾನು ಅನಧಿಕೃತವಾಗಿ ಗೈರಾಗಿದ್ದೇನೆ ಎಂದು ತಿಳಿಸಿ, ವೇತನ ನೀಡಿಲ್ಲ. ಆದ್ದರಿಂದ, ವೇತನ ಮತ್ತು ಭತ್ಯೆ ಪಾವತಿಸಲು ಆದೇಶಿಸುವಂತೆ ಕೋರಿದ್ದರು. ಈ ಮನವಿ ಪತ್ರವನ್ನು ಪರಿಗಣಿಸದ್ದಕ್ಕೆ 2015ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ಕಾಂತರಾಜು ನಿರ್ದಿಷ್ಟ ಸಮಯದಲ್ಲಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದರೆ ರಾಘವೇಂದ್ರ ಆಶ್ರಮದ ಶಾಲೆಯ ಮುಖ್ಯ ಶಿಕ್ಷಕರು ಶಿಸ್ತು ಕ್ರಮ ಜರುಗಿಸಬೇಕಿತ್ತು. ಆದರೆ, ಈವರೆಗೂ ಅದನ್ನು ನಿರ್ವಹಿಸಿಲ್ಲ. ಮುಖ್ಯ ಶಿಕ್ಷಕರು ಕಾಂತರಾಜು ಗೈರಾಗಿದ್ದ ದಿನಗಳ ಸಂಬಂಧ ಕೇವಲ ಎರಡು ತಿಂಗಳಿಗಷ್ಟೇ ಬಿಲ್ ನೀಡಿದ್ದಾರೆ. ಉಳಿದ ದಿನಗಳಿಗೆ ಬಿಲ್ ಸೃಜನೆ ಮತ್ತು ರಜೆ ಮಂಜೂರಾತಿ ವಿಚಾರದಲ್ಲಿ ಏನು ಮಾಡಬೇಕು ಎಂದು ಶಿಕ್ಷಣಾಧಿಕಾರಿ ಬಳಿ ಕೇಳಿಲ್ಲ. ಇಲ್ಲಿ ಮುಖ್ಯ ಶಿಕ್ಷಕರ ಕಡೆಯಿಂದ ಲೋಪವಾಗಿದೆ. ಆದ್ದರಿಂದ ಶೇ.8ರಷ್ಟು ಬಡ್ಡಿದರಲ್ಲಿ ಕಾಂತರಾಜುಗೆ ವೇತನ ಪಾವತಿಸುವಂತೆ ಮುಖ್ಯ ಶಿಕ್ಷಕರಿಗೆ 2020ರ ಡಿಸೆಂಬರ್‌ 2ರಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಮುಖ್ಯ ಶಿಕ್ಷಕರು ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿರುವ ವಿಭಾಗೀಯ ಪೀಠವು ಕಾಂತರಾಜು ಅನಧಿಕೃತವಾಗಿ ಗೈರಾಗಿದ್ದ ಅವಧಿಗೆ ಶಿಸ್ತುಕ್ರಮ ಜರುಗಿಸಬೇಕಿತ್ತು. ಕ್ರಮ ಜರುಗಿಸದ ಹಿನ್ನೆಲೆಯಿಲ್ಲಿ ಅನಧಿಕೃತವಾಗಿ ಗೈರಾಗಿದ್ದಾರೆ ಎಂದು ತೀರ್ಮಾನಿಸಲಾಗದು. ಉದ್ಯೋಗಿಯು ಸೇವೆಯಲ್ಲಿ ಮುಂದುವರಿಯುವವರೆಗೆ, ವೇತನ ಪಡೆಯಲು ಅರ್ಹನರಾಗಿರುತ್ತಾರೆ. ಆದ್ದರಿಂದ ಕಾಂತರಾಜುಗೆ ವೇತನ ಪಾವತಿಸಬೇಕು ಎಂದು ನಿರ್ದೇಶಿಸಿದೆ.

Kannada Bar & Bench
kannada.barandbench.com