ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿ ಕಚೇರಿಗಳಿಗೆ ಬೀಗ ಹಾಕಿರುವ ಪ್ರಕರಣದ ಸಂಬಂಧ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶ ಕಾಯ್ದಿರಿಸಿದೆ.
ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ರಾಜ್ಯ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ಅವರು ಎಸ್‌ಡಿಪಿಐ ಕಚೇರಿಗಳನ್ನು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸಂಘಟನೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಆಧರಿಸಿ, ಜಿಲ್ಲಾಧಿಕಾರಿಗಳು ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದನ್ನು ದೃಢಪಡಿಸಿಕೊಂಡ ನಂತರವೇ ಕ್ರಮ ಕೈಗೊಂಡಿದ್ದಾರೆ ಎಂದರು.
ಜಿಲ್ಲಾಡಳಿತ ಸಮಗ್ರ ಮಾಹಿತಿ ಕಲೆಹಾಕಿ, ತನಿಖೆ ನಡೆಸಿ, ಶಾಂತಿ ಭಂಗ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದ ಕೃತ್ಯಗಳನ್ನು ನಡೆಸುತ್ತಿದೆ ಎಂಬುದನ್ನು ಮನಗಂಡ ಬಳಿಕ ಎಸ್‌ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ, ನಂತರ ಅವುಗಳಿಗೆ ಬೀಗ ಹಾಕಲಾಗಿದೆ. ಒಂದು ವೇಳೆ ಅರ್ಜಿದಾರರು ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸುವುದಾದರೆ ಅದನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಕಚೇರಿ ಜಾಗದ ಬಗ್ಗೆ ಮಾಡಿಕೊಂಡಿರುವ ಬಾಡಿಗೆ ಒಪ್ಪಂದಗಳಲ್ಲಿ ಉದ್ದೇಶವನ್ನು ನಮೂದಿಸಿಲ್ಲ. ಕೆಲವು ಒಪ್ಪಂದಗಳ ಅವಧಿ ಮುಗಿದಿದೆ, ಆ ಕಟ್ಟಡಗಳ ಮಾಲೀಕರನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಪರ ವಾದಿಸಿದ ಸಹಾಯಕ ಸಾಲಿಸಿಟರ್ ಜರನಲ್ ಎಚ್ ಶಾಂತಿಭೂಷಣ್ ಅವರು ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಿದೆ. ರಾಜ್ಯ ಸರ್ಕಾರ ತನ್ನ ಗುಪ್ತಚರ ಮಾಹಿತಿ ಆಧರಿಸಿ ಎಸ್‌ಡಿಪಿಐ ಕಚೇರಿಗಳಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಚಟುವಟಿಕೆಗಳನ್ನು ನಡೆಯುತ್ತಿದ್ದರಿಂದ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿದೆ ಎಂದರು.
ಅರ್ಜಿದಾರರ ಪರ ವಕೀಲರು, ಯಾವುದೇ ಮಾಹಿತಿ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐ ಕಚೇರಿಗಳು, ಚುನಾಯಿತ ಕಾರ್ಪೊರೇಟರ್‌ಗಳ ಕಚೇರಿಗಳಿಗೆ ಬೀಗ ಹಾಕಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಎಸ್‌ಡಿಪಿಐ ಪಕ್ಷದ ಹಲವು ಮಂದಿ ಚುನಾಯಿತರಾಗಿದ್ದಾರೆ. ದಕ್ಷಿಣ ಕನ್ನಡದಲಿ 200ಕ್ಕೂ ಅಧಿಕ ಚುನಾಯಿತ ಪ್ರತಿನಿಗಳಿದ್ದು, ರಾಜಕೀಯ ಚಟುವಟಿಕೆ ನಡೆಸಲು ಅವರಿಗೆ ಕಚೇರಿಯ ಅಗತ್ಯವಿದೆ. ಆದ್ದರಿಂದ, ಜಪ್ತಿ ಮಾಡಿರುವ ಕಚೇರಿಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದರು.
ಪ್ರಜಾಪ್ರತಿನಿಧಿ ಕಾಯಿದೆ-1951ರ ಅಡಿ ನೋಂದಾಯಿತ ರಾಜಕೀಯ ಪಕ್ಷ ವಾಗಿರುವ ಎಸ್‌ಡಿಪಿಐ, ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೆಲ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಪಕ್ಷ ಗುರಿಯಾಗಿದ್ದು, ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಪಿಎಫ್‌ಐ ಜತೆ ಎಸ್‌ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.