ಕಂಪೆನಿಯೊಂದರ ಷೇರು ಕುರಿತಂತೆ ದಿಕ್ಕುತಪ್ಪಿಸುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿ ಅಕ್ರಮವಾಗಿ ಲಾಭಗಳಿಸುವ ಸಂಚಿನ ಭಾಗವಾದ ಆರೋಪದಡಿ ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಹಾಗೂ 29 ಮಂದಿಯನ್ನು ಭಾರತೀಯ ಷೇರು ಮತ್ತು ವಿನಿಯಮ ಮಂಡಳಿ (ಸೆಬಿ) ಅನಿರ್ದಿಷ್ಟಾವಧಿಯವರೆಗೆ ಷೇರುಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ನಿರ್ಬಂಧಿಸಿದೆ.
ಷೇರು ಬೆಲೆಯನ್ನು ತಿರುಚಿ ನಂತರ ಭಾರಿ ಬೆಲೆಗೆ ಮಾರಾಟವಾಗುವಂತೆ ಮಾಡಿ ಅವುಗಳನ್ನು ಖರೀದಿಸುವಂತೆ ಆಮಿಷವೊಡ್ಡುವ ಮಾಹಿತಿಯನ್ನು ಈ ಮಂದಿ ಯೂಟ್ಯೂಬ್‌ನಲ್ಲಿ ಹರಿಯಬಿಟ್ಟಿದ್ದರು ಎಂಬುದು ವಾರ್ಸಿ ಅವರ ಮೇಲಿರುವ ಆರೋಪವಾಗಿದೆ.
ಸಾಧನಾ ಬ್ರಾಡ್‌ಕಾಸ್ಟ್ ಲಿಮಿಟೆಡ್ ಕಂಪೆನಿಯ ಷೇರುಪಟ್ಟಿಯಲ್ಲಿ ಷೇರುಗಳ ಬೆಲೆಯನ್ನು ತಿರುಚಿ ಅದರ ಸ್ಥಾನ ಹೆಚ್ಚುವಂತೆ ಮಾಡುವ ಉದ್ದೇಶ ವಾರ್ಸಿ ಅವರಿಗಿತ್ತು. ಹೀಗಾಗಿ ಹೂಡಿಕೆ ಮಾಡುವುದಕ್ಕೆ ಜನರನ್ನು ಆಕರ್ಷಿಸಲೆಂದು ಕೋಟ್ಯಂತರ ರೂಪಾಯಿ ಮೌಲ್ಯದ ಪಾವತಿಸಿದ ಮಾರುಕಟ್ಟೆ ಅಭಿಯಾನ ನಡೆಸಿ ಸುಳ್ಳು ವಿಚಾರಗಳನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂಬ ಸಂಗತಿ ಸೆಬಿಗೆ ತಿಳಿದುಬಂದಿತ್ತು.
ಈ ರೀತಿ ಮಾಡುವುದು ಸೆಬಿ ಕಾಯಿದೆ ಮತ್ತು ಸೆಬಿ (ಷೇರು ಮಾರುಕಟ್ಟೆಗೆ ಸಂಬಂಧಿಸಿದ ಮೋಸ ಮತ್ತು ಅಕ್ರಮ ವ್ಯಾಪಾರ ಪ್ರವೃತ್ತಿಯ ನಿಷೇಧ) ನಿಯಮಾವಳಿ- 2003ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಜುಲೈ 2022 ರ ದ್ವಿತೀಯಾರ್ಧದಲ್ಲಿ, ಕಂಪನಿಯ ಬಗ್ಗೆ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ವೀಡಿಯೊಗಳನ್ನು ಮನೀಶ್ ಮಿಶ್ರಾ ಅವರು ನಡೆಸುವ ಮಿಡ್‌ಕ್ಯಾಪ್ ಕಾಲ್ಸ್ ಮತ್ತು ಪ್ರಾಫಿಟ್ ಯಾತ್ರಾ ಎಂಬ ಎರಡು ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಹೂಡಿಕೆದಾರರು ಅಸಾಧಾರಣ ಲಾಭಕ್ಕಾಗಿ ಸಾಧನಾ ಸಂಸ್ಥೆಯ ಷೇರುಗಳನ್ನು ಖರೀದಿಸಬೇಕು ಎಂದು ಶಿಫಾರಸು ಮಾಡಲು ಈ ಚಾನಲ್‌ಗಳಲ್ಲಿನ ವೀಡಿಯೊಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಸುದ್ದಿಗಳನ್ನು ಹರಡಿವೆ ಎನ್ನಲಾಗಿತ್ತು.
ಈ ಅಕ್ರಮ ಸಂಚಿನ ಭಾಗವಾಗಿ ಕಂಪೆನಿಯ ಷೇರುಗಳ ಮಾರಾಟದಲ್ಲಿ ವ್ಯಾಪಕ ಹೆಚ್ಚಳ ಮಾಡಿದ ಮತ್ತು ಬಂಡವಾಳ ಪತ್ರದಲ್ಲಿ ಆಸಕ್ತಿ ಹುಟ್ಟಿಸಲು ಕಾರಣರಾದ ಈ ದಂಪತಿಯನ್ನು ಷೇರು ವಹಿವಾಟಿನ ಪ್ರಮಾಣದ ಸೃಷ್ಟಿಕರ್ತರೆಂದು (ವಾಲ್ಯೂಮ್ ಕ್ರಿಯೇಟರ್ಸ್) ಎಂದು ವರ್ಗೀಕರಿಸಲಾಗಿದೆ.