ಷೇರುಪೇಟೆ ಕೈಚಳಕ: ಮುಕೇಶ್‌ ಅಂಬಾನಿಗೆ ₹15 ಕೋಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ₹25 ಕೋಟಿ ದಂಡ ವಿಧಿಸಿದ ಸೆಬಿ

ಷೇರು ಮಾರಾಟ ವ್ಯವಹಾರದಲ್ಲಿನ ಕೈಚಳಕದಿಂದಾಗಿ ಷೇರುಗಳ ದರ ಕುಸಿತವಾದರೂ ಲಾಭವಾಗಿದ್ದು, ಅದನ್ನು ಆರ್‌ಐಎಲ್‌ ಏಜೆಂಟರುಗಳು ಹಿಂದಿನ ಒಪ್ಪಂದದಂತೆ ಆರ್‌ಐಎಲ್‌ಗೆ ವರ್ಗಾವಣೆ ಮಾಡಿದ್ದಾರೆ ಎಂದು ಸೆಬಿ ತನ್ನ ಆದೇಶದಲ್ಲಿ ಹೇಳಿದೆ.
ಷೇರುಪೇಟೆ ಕೈಚಳಕ: ಮುಕೇಶ್‌ ಅಂಬಾನಿಗೆ ₹15 ಕೋಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ₹25 ಕೋಟಿ ದಂಡ ವಿಧಿಸಿದ ಸೆಬಿ
SEBI, Mukesh Ambani

ರಿಲಯನ್ಸ್‌ ಪೆಟ್ರೋಲಿಯಂ ಲಿಮಿಟೆಡ್‌ನಲ್ಲಿ (ಆರ್‌ಪಿಎಲ್‌) ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಶೇ. 5ರಷ್ಟು ಪಾಲು ಮಾರಾಟ ಮಾಡುವ ಕುರಿತಾದ ವ್ಯವಹಾರದಲ್ಲಿನ ಕೈಚಳಕಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಶುಕ್ರವಾರ ಮುಕೇಶ್‌ ಅಂಬಾನಿ ಅವರಿಗೆ 15 ಕೋಟಿ ರೂಪಾಯಿ ಹಾಗೂ ಆರ್‌ಐಎಲ್‌ಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ.

ಆರ್‌ಪಿಎಲ್ ಷೇರು ಮಾರಾಟ ವ್ಯವಹಾರವನ್ನು ನಗದು ವಿಭಾಗದಲ್ಲಿ ಆರ್‌ಐಎಲ್‌ ಕೈಗೊಂಡಿದ್ದ ವೇಳೆಯಲ್ಲಿಯೇ, ಇತ್ತ ಆರ್‌ಐಎಲ್‌ ನೇಮಿಸಿದ ಹನ್ನೆರಡು ಏಜೆಂಟ್‌ಗಳು ಆರ್‌ಐಎಲ್‌ ಪರವಾಗಿ ಎಫ್‌ ಅಂಡ್‌ ಒ (ಫ್ಯೂಚರ್ ಅಂಡ್‌ ಆಫ್ಷನ್ಸ್) ವಿಭಾಗದಲ್ಲಿ ಆನಂತರ ಖರೀದಿಸುವ ಉದ್ದೇಶದಿಂದ ಷೇರುಗಳನ್ನು ಮಾರಾಟದಲ್ಲಿ ತೊಡಗಿದ್ದರು (ಶಾರ್ಟ್‌ ಪೊಸಿಷನ್ಸ್).

ಈ ಕೈಚಳಕದ ವ್ಯವಹಾರದಿಂದಾಗಿ ಷೇರುಗಳ ದರ ಕುಸಿತವಾದರೂ ಅದರಿಂದ ಲಾಭವಾಗಿದ್ದು, ಅದನ್ನು ಆರ್‌ಐಎಲ್‌ ಏಜೆಂಟರುಗಳು ಹಿಂದಿನ ಒಪ್ಪಂದದಂತೆ ಆರ್‌ಐಎಲ್‌ಗೆ ವರ್ಗಾವಣೆ ಮಾಡಿದ್ದಾರೆ ಎಂದು ಸೆಬಿ ತನ್ನ ಆದೇಶದಲ್ಲಿ ಹೇಳಿದೆ.

“ಸದರಿ ಪ್ರಕರಣದಲ್ಲಿ ಮೇಲೆ ಹೇಳಲಾದ ಎಫ್‌ ಅಂಡ್‌ ಒ ವಿಭಾಗದ ವಹಿವಾಟಿನ ಹಿಂದಿರುವ ಸಂಸ್ಥೆಯು ಆರ್‌ಐಎಲ್‌ ಎಂಬುದು ಸಾಮಾನ್ಯ ಹೂಡಿಕೆದಾರರಿಗೆ ತಿಳಿದಿರಲಿಲ್ಲ. ಈ ವಂಚನೆಯ ವಹಿವಾಟಿನ ಪರಿಣಾಮವು ನಗದು ಮತ್ತು ಎಫ್‌ ಅಂಡ್‌ ಒ ವಿಭಾಗಗಳೆರಡರಲ್ಲಿಯೂ ಆರ್‌ಐಎಲ್‌ನ ಷೇರುಗಳ ಮೇಲೆ ಉಂಟಾಯಿತು, ಆ ಮೂಲಕ ಹೂಡಿಕೆದಾರರ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡಿತು," ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆರ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್‌ ಅಂಬಾನಿ ಅವರು ಆರ್‌ಐಎಲ್‌ನ ಷೇರುಪೇಟೆ ವ್ಯವಹಾರದ ಕೈಚಳಕಕ್ಕೆ ಕಾರಣ ಎಂದು ನಿರ್ಧರಿಸಿದ ಸೆಬಿ ಅವರಿಗೆ ದಂಡ ವಿಧಿಸಿದೆ.

2007ರ ನವೆಂಬರ್‌ 29ರಿಂದ ಇಲ್ಲಿಯವರೆಗೆ 447.27 ಕೋಟಿ ರೂಪಾಯಿಯ ಜೊತೆಗೆ ವಾರ್ಷಿಕವಾಗಿ ಶೇ. 12ರಷ್ಟು ಬಡ್ಡಿ ಸೇರಿಸಿ ಪಾವತಿಸುವಂತೆ 2017ರಲ್ಲಿ ಆರ್‌ಐಎಲ್‌ಗೆ ಸೆಬಿ ನಿರ್ದೇಶಿಸಿತ್ತು. ಇದರ ಜೊತೆಗೆ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಷೇರು ಪೇಟೆಯ ಎಫ್‌ ಅಂಡ್‌ ಒ ವಿಭಾಗದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಹಿವಾಟು ನಡೆಸದಂತೆ ಆದೇಶಿಸಿತ್ತು.

ಪ್ರಕರಣದ ಹಿನ್ನೆಲೆ: 2007–08ರ ವ್ಯವಹಾರ ಯೋಜನೆ ಮತ್ತು ಮುಂದಿನ ಎರಡು ವರ್ಷಗಳ ಸಂಪನ್ಮೂಲ ಅವಶ್ಯಕತೆಗೆ ಅಂದಾಜು 87 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ ಎಂದು 2007ರ ಮಾರ್ಚ್‌ 29ರಂದು ಆರ್‌ಐಎಲ್‌ನ ನಿರ್ದೇಶಕರ ಮಂಡಳಿ ನಿಲುವಳಿಗೆ ಒಪ್ಪಿಗೆ ನೀಡಿತ್ತು. ಆನಂತರ 2007ರ ನವೆಂಬರ್‌ನಲ್ಲಿ ಆರ್‌ಪಿಎಲ್‌ನಲ್ಲಿ ಅಂದಾಜು ಶೇ. 5ರಷ್ಟು ಪಾಲು ಮಾರಾಟ ಮಾಡಲು ನಿರ್ಧಾರ ಕೈಗೊಂಡಿತ್ತು (22.5 ಕೋಟಿ ಆರ್‌ಪಿಎಲ್‌ ಷೇರು). ಇದರ ಬೆನ್ನಿಗೇ ತನ್ನ ಪರವಾಗಿ ವರ್ಗಾವಣೆ ಚಟುವಟಿಕೆ ನಡೆಸುವ ಸಂಬಂಧ 2007ರ ನವೆಂಬರ್‌ನಲ್ಲಿ ಆರ್‌ಐಎಲ್‌ 2007ರ ಅಕ್ಟೋಬರ್ 30ರಿಂದ 2007ರ ನವೆಂಬರ್‌ 3ರ ವರೆಗೆ ಹನ್ನೆರಡು ಏಜೆಂಟರುಗಳನ್ನು ನೇಮಿಸಿತ್ತು ಎನ್ನಲಾಗಿದೆ.

Also Read
ವೊಡಾಫೋನ್ ತೆರಿಗೆ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ತೀರ್ಪಿತ್ತ ಅಂತರರಾಷ್ಟ್ರೀಯ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿ

2007ರ ನವೆಂಬರ್‌ 1ರಿಂದ 2007ರ ನವೆಂಬರ್‌ 29ರ ವರೆಗೆ ಆರ್‌ಐಎಲ್‌ ನಗದು ವಿಭಾಗದಲ್ಲಿ ಹಲವು ಮಾರಾಟದ ವರ್ಗಾವಣೆಗಳನ್ನು ನಡೆಸಿದ್ದು, ಏಜೆಂಟರ ಮೂಲಕ ಎಫ್‌ ಅಂಡ್‌ ಒ ವಿಭಾಗದಲ್ಲಿ ಆರ್‌ಐಎಲ್‌ ವಹಿವಾಟು ನಡೆಸಿತು. 2007ರ ನವೆಂಬರ್‌ 15ರ ನಂತರ ಎಫ್‌ ಅಂಡ್‌ ಒ ವಿಭಾಗದಲ್ಲಿ ಆರ್‌ಐಎಲ್‌ ಮರಳಿ ಷೇರು ಖರೀದಿಸುವ ಉದ್ದೇಶದಿಂದ ನಡೆಸಿದ ಅಲ್ಪ ಅವಧಿ ಷೇರು ಮಾರಾಟದ ವಹಿವಾಟು (ಶಾರ್ಟ್‌ ಪೊಸಿಷನ್), ನಗದು ವಿಭಾಗದಲ್ಲಿ ಉದ್ದೇಶಿತ ಮಾರಾಟದ ನಿರೀಕ್ಷೆಗಿಂತ ಹೆಚ್ಚಾಗುವಂತೆ ಮಾಡಿತು.

ನವೆಂಬರ್ 29, 2007 ರಂದು, ಆರ್‌ಐಎಲ್‌ ವಹಿವಾಟಿನ ಕೊನೆಯ 10 ನಿಮಿಷಗಳಲ್ಲಿ ನಗದು ವಿಭಾಗದಲ್ಲಿ ಒಟ್ಟು 2.25 ಕೋಟಿ ಷೇರುಗಳನ್ನು ಮಾರಾಟ ಮಾಡಿತು. ಪರಿಣಾಮವಾಗಿ ಆರ್‌ಪಿಎಲ್‌ ಷೇರುಗಳ ಬೆಲೆಗಳು ಕುಸಿದವು, ಇದು ಎಫ್ ಅಂಡ್‌ ಒ ವಿಭಾಗದಲ್ಲಿ ಆರ್‌ಪಿಎಲ್ ನ‌ ನವೆಂಬರ್ ತಿಂಗಳ ಫ್ಯೂಚರ್ಸ್‌ನ ಷೇರುಗಳ ಸರಾಸರಿ ಬೆಲೆಯನ್ನು ಸಹ ಕಡಿಮೆ ಮಾಡಿತು. ಹೀಗೆ ಕುಸಿತ ಕಂಡ ಸರಾಸರಿ ಷೇರು ಬೆಲೆಯು ಪರೋಕ್ಷವಾಗಿ ಆರ್‌ಐಎಲ್‌ನ ಒಟ್ಟು 7.97 ಕೋಟಿ ಷೇರುಗಳ ಮೇಲೆ ಅನ್ವಯಿಸಿದ್ದರಿಂದ ಹಾಗೂ ಏಜೆಂಟರು ಕೈಜೋಡಿಸಿದ್ದರಿಂದ ಆರ್‌ಐಎಲ್‌ ಲಾಭಗಳಿಸಿತು. ಆ ಲಾಭಾಂಶವನ್ನು ಹಿಂದಿನ ಕರಾರಿನಂತೆ ಆರ್‌ಐಎಲ್‌ಗೆ ವರ್ಗಾವಣೆ ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com