ಅರ್ಹತೆ ಆಧಾರದಲ್ಲಿ ಮೊದಲ ಎಫ್ಐಆರ್ ರದ್ದಾಗಿದ್ದಾಗ ಅದೇ ಆಧಾರದ ಮೇಲೆ ಎರಡನೇ ಎಫ್‌ಐಆರ್ ದಾಖಲಿಸಲಾಗದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ತಾವು ಸಲ್ಲಿಸಿರುವ ದೂರುಗಳನ್ನು ತಿರಸ್ಕರಿಸಿ ತಿರುವನಂತಪುರದ ವಿಚಾರಣಾ ಆಯುಕ್ತ ಮತ್ತು ವಿಶೇಷ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಮಾನ್ಯ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಡರಂಗದ ವಿ ಎಸ್ ಅಚ್ಚುತಾನಂದನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.
"ಅರ್ಹತೆ ಆಧಾರದಲ್ಲಿ ಮೊದಲ ಎಫ್ಐಆರ್ ರದ್ದಾಗಿದ್ದಾಗ ಅದೇ ಆಧಾರದ ಮೇಲೆ ಎರಡನೇ ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲವಾದ್ದರಿಂದ ವಿಶೇಷ ನ್ಯಾಯಾಧೀಶರು ಸಂಪೂರ್ಣ ಸಮರ್ಥನೀಯವಾಗಿ ದೂರನ್ನು ತಿರಸ್ಕರಿಸಿದ್ದರು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮಾಲ್ ಒಂದಕ್ಕೆ ಸಂಬಂಧಿಸಿದ ಒಳಚರಂಡಿ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತಿತರರ ವಿರುದ್ಧ ಅಚ್ಚುತಾನಂದನ್ ವಿಶೇಷ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಆಗ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದರು ಮತ್ತು ಉಳಿದ ಅರ್ಜಿದಾರರು ಉನ್ನತ ಹುದ್ದೆಯಲ್ಲಿದ್ದರು. ಇದು ಜಲ ಪ್ರಾಧಿಕಾರದ ಕಾಮಗಾರಿ ಮೇಲೆ ಪರಿಣಾಮ ಬೀರಿದ್ದು ಪ್ರತಿವಾದಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಜೊತೆಗೆ 1988ರ ಭ್ರಷ್ಟಾಚಾರ ತಡೆ ಕಾಯಿದೆ ಸೆಕ್ಷನ್ 13 (1) (ಡಿ) ಅನುಸರಣೆ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಚಾಂಡಿ ಅವರು ಪ್ರಕರಣದ ಎರಡನೇ ಪ್ರತಿವಾದಿಯಾಗಿದ್ದರು.
ಅಚ್ಚುತಾನಂದನ್ ಪರ ಹಾಜರಾದ ವಕೀಲ ಎಸ್ ಚಂದ್ರಶೇಖರನ್ ನಾಯರ್ ಹೈಕೋರ್ಟ್ ಹಿಂದಿನ ಎಫ್‌ಐಆರ್ ತಿರಸ್ಕರಿಸಿದೆ ಎಂಬ ಒಂದೇ ಕಾರಣಕ್ಕೆ ವಿಶೇಷ ನ್ಯಾಯಾಧೀಶರು ದೂರನ್ನು ತಿರಸ್ಕರಿಸುವುದು ಸೂಕ್ತವಲ್ಲ ಎಂದು ವಾದಿಸಿದರು. ಎಫ್‌ಐಆರ್ ಮತ್ತು ದೂರಿನಲ್ಲಿರುವ ಆರೋಪಗಳು ಭಿನ್ನವಾಗಿದ್ದು ಪ್ರಾಥಮಿಕ ತನಿಖೆ ನಡೆಸದೆ ಯಾವುದೇ ಕಾರಣಕ್ಕೂ ದೂರನ್ನು ತಿರಸ್ಕರಿಸಬಾರದು ಎಂದು ಸುಪ್ರೀಂಕೋರ್ಟ್‌ನ ಲಲಿತಾಕುಮಾರಿ ಮತ್ತು ಉತ್ತರಪ್ರದೇಶ ಸರ್ಕಾರದ ನಡುವಣ ತೀರ್ಪನ್ನು ಉಲ್ಲೇಖಿಸಿ ವಿವರಿಸಿದರು.
ಆದರೆ ಲಲಿತಾಕುಮಾರಿ ಪ್ರಕರಣದ ತೀರ್ಪನ್ನು ಈ ಪ್ರಕರಣಕ್ಕೆ ಅನ್ವಯಿಸಲಾಗದು ಎಂದ ನ್ಯಾಯಮೂರ್ತಿ ಅರುಣ್ ಅವರಿದ್ದ ಪೀಠ “ಅರ್ಜಿಯಲ್ಲಿರುವ ಮತ್ತು ಎಫ್‌ಐಆರ್‌ನಲ್ಲಿರುವ ದೂರುಗಳು ಬಹುತೇಕ ಒಂದೇ ರೀತಿಯಾಗಿವೆ. ಕೆಲವು ಹೆಚ್ಚುವರಿ ದೂರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದರೂ ಎಫ್‌ಐಆರ್‌ನಲ್ಲಿ ಎಲ್ಲಾ ಸಂಗತಿಗಳನ್ನು ಅಡಕಗೊಳಿಸಬೇಕೆಂದೇನೂ ಇಲ್ಲ ಎಂದು ಈಗಾಗಲೇ ಇತ್ಯರ್ಥವಾಗಿರುವ ಕಾನೂನಿನಂತೆ ದೂರು ಅಪ್ರಸ್ತುತವಾಗಿದೆ” ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: