ಜಂಟಿ ಖಾತೆಗೆ ಸಂಬಂಧಿಸಿದ ಚೆಕ್ ಬೌನ್ಸ್ ಆದ ಸಂದರ್ಭದಲ್ಲಿ ಸಹಿ ಮಾಡದ ಖಾತೆದಾರರನ್ನು ವಿಚಾರಣೆಗೆ ಒಳಪಡಿಸಬಹುದೇ ಎಂಬುದನ್ನು ಪರಿಶೀಲಿಸಲು ಕಳೆದ ವಾರ ಸುಪ್ರೀಂ ಕೋರ್ಟ್ ಸಮ್ಮತಿಸಿದೆ [ಕೆ ವೆಂಕಿಡಾಪತಿ ಮತ್ತು ಇತರರು ವರ್ಸಸ್ ಕೆ ಎಸ್ ಸೇನಾಥಿಪತಿ].
ಹಣದ ಕೊರತೆಯಿಂದ ಜಂಟಿ ಖಾತೆಗೆ ಸೇರಿದ ಚೆಕ್ ಬೌನ್ಸ್ ಆದ ಪ್ರಕರಣದಲ್ಲಿ ಚೆಕ್‌ಗೆ ಸಹಿ ಮಾಡದ ಖಾತೆದಾರರ ವಿರುದ್ಧ ವಿಚಾರಣಾ ಪ್ರಕ್ರಿಯೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿದೆ.
ಚೆಕ್ ಕುರಿತಾಗಿ ಅರ್ಜಿದಾರರು ಯಾವುದೇ ತಕರಾರು ಹೊಂದಿಲ್ಲ. ಆದರೆ, ಪ್ರಕರಣವು ವಿಚಾರಣೆಯಿಂದ ಸಾಬೀತಾಗಬೇಕಿದೆ ಎಂದು ಮದ್ರಾಸ್ ಹೈಕೋರ್ಟ್ ಪ್ರಕ್ರಿಯೆ ವಜಾ ಮಾಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಮೊದಲ ಅರ್ಜಿದಾರರು ಕಾಟನ್ ಮಿಲ್‌ನ ಮಾಲೀಕರಾಗಿದ್ದು, ಎರಡನೇ ಅರ್ಜಿದಾರರು ಅವರ ಪುತ್ರಿಯಾಗಿದ್ದಾರೆ. ₹20 ಲಕ್ಷ ಸಾಲ ಪಾವತಿಗೆ ಸಂಬಂಧಿಸಿದಂತೆ 2016ರಲ್ಲಿ ಪ್ರತಿವಾದಿಗಳು ಇಬ್ಬರ ವಿರುದ್ಧವೂ ಲಿಖಿತ ವರ್ಗಾವಣೀಯ ಕಾಯಿದೆ ಸೆಕ್ಷನ್ 138ರಂದು ಪ್ರಕರಣ ದಾಖಲಿಸಿದ್ದರು.
ಇಬ್ಬರು ಜಂಟಿ ಖಾತೆ ಹೊಂದಿದ್ದು, ಪ್ರತಿವಾದಿ ಹಣ ಸ್ವೀಕರಿಸಿದ ಸಂದರ್ಭದಲ್ಲಿ ಅರ್ಜಿದಾರೆ ಪುತ್ರಿ ಇದ್ದರು. ಆದರೆ, ಆಕೆ ಚೆಕ್‌ಗೆ ಸಹಿ ಮಾಡಿಲಿಲ್ಲ. ಬಡ್ಡಿಯನ್ನು ಒಳಗೊಂಡ ಅಸಲನ್ನು ಸೇರಿಸಿ ಮುಂದಿನ ದಿನಾಂಕ ಹಾಕಿ ಚೆಕ್ ಅನ್ನು ಅರ್ಜಿದಾರರು ನೀಡಿದ್ದರು. ಆನಂತರ ಅದು ಬೌನ್ಸ್ ಆಗಿತ್ತು.
ಈ ಪ್ರಕ್ರಿಯೆ ವಜಾ ಮಾಡುವಂತೆ ಕೋರಿ 2018ರಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ಅರ್ಹತೆ ವಿಚಾರ ಪರಿಶೀಲಿಸದ ಪೀಠವು ಅರ್ಜಿಯನ್ನು ಜನವರಿಯಲ್ಲಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.