ಫೆಮಾ ಅಡಿ ₹5,500 ಕೋಟಿ ಜಪ್ತಿ; ಆದರೆ ಇದು ಏಕೆ ಅಗತ್ಯ ಎಂದು ಒಂದೇ ಒಂದು ಪದ ಹೇಳಿಲ್ಲ: ಹೈಕೋರ್ಟ್‌ನಲ್ಲಿ ಶಓಮಿ ವಾದ

ಫೆಮಾದ ಸೆಕ್ಷನ್‌ 37ಎ ಸ್ಪಷ್ಟವಾಗಿ ಸ್ವೇಚ್ಛೆಯಿಂದ ಕೂಡಿದ್ದು, ಇದರಲ್ಲಿ ಪ್ರಾಧಿಕಾರಗಳಿಗೆ ಆಸ್ತಿ ಜಪ್ತಿ ಮಾಡಲು ಅನಿಯಂತ್ರಿತ ಅಧಿಕಾರ ನೀಡಲಾಗಿದೆ ಎಂದು ಶಓಮಿ ವಕೀಲರು ವಾದಿಸಿದ್ದಾರೆ.
Karnataka High Court, Xiaomi
Karnataka High Court, Xiaomi

ಶಓಮಿ ಭಾರತದ ಖಾತೆಯಿಂದ ₹5,500 ಕೋಟಿಯನ್ನು ಜಪ್ತಿ ಮಾಡಲಾಗಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೇಮಾ) ಸೆಕ್ಷನ್‌ 37ಎ ಅಡಿ ಏಕೆ ಅದು ಅಗತ್ಯ ಎಂಬುದರ ಬಗ್ಗೆ ಒಂದೇ ಒಂದು ಮಾತು ಹೇಳಲಾಗಿಲ್ಲ ಎಂದು ಚೀನಾದ ಟೆಕ್‌ ಕಂಪೆನಿ ಶಓಮಿ ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯದ ಜಪ್ತಿ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಚೀನಾದ ಶಓಮಿ ತಂತ್ರಜ್ಞಾನ ಸಂಸ್ಥೆಗೆ ಸೇರಿದ 5551.27 ಕೋಟಿ ರೂಪಾಯಿ ಜಫ್ತಿ ಮಾಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಶಓಮಿ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಶಓಮಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಜಿ ರಾಘವನ್‌ ಅವರು “ಫೇಮಾದ ಸೆಕ್ಷನ್‌ 37ಎ ಸ್ವೇಚ್ಛೆಯಿಂದ ಕೂಡಿದೆ. ಯಾವಾಗ ಮತ್ತು ಹೇಗೆ ಆ ಅಧಿಕಾರವನ್ನು ಬಳಕೆ ಮಾಡಬೇಕು ಎಂಬುದಕ್ಕೆ ಯಾವುದೇ ಮಾರ್ಗಸೂಚಿಗಳನ್ನು ಪ್ರಾಧಿಕಾರಗಳಿಗೆ ರೂಪಿಸಲಾಗಿಲ್ಲ. ಇದು ಪ್ರಾಧಿಕಾರಗಳಿಗೆ ಅನಿಯಂತ್ರಿತ ಅಧಿಕಾರ ನೀಡಿದೆ” ಎಂದರು.

“ಜಪ್ತಿ ಮಾಡಲು ಅಥವಾ ತಾತ್ಕಾಲಿಕವಾಗಿ ಆಸ್ತಿಯನ್ನು ಜಪ್ತಿ ಮಾಡಲು ಇತರೆ ಶಾಸನದಲ್ಲಿ ಅಧಿಕಾರ ನೀಡಲಾಗಿದ್ದು, ಇವುಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಡಕಗೊಳಿಸಲಾಗಿದೆ. ಜಪ್ತಿ ಆದೇಶಕ್ಕೂ ಮುನ್ನ ಇದನ್ನು ಪೂರೈಸಬೇಕು. ಆದರೆ, ಫೇಮಾ ಸೆಕ್ಷನ್‌ 37ಎ ಅಡಿ ಯಾವಾಗ ಜಪ್ತಿ ಆದೇಶ ಮಾಡುವುದು ಅಗತ್ಯ ಎಂಬುದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಇಲ್ಲ” ಎಂದರು.

“ಸೆಕ್ಷನ್‌ 37ಎ ಅಡಿ ಏಕೆ ಅಧಿಕಾರ ಚಲಾಯಿಸಲಾಗಿದೆ? ಏನನ್ನೂ ಉಲ್ಲೇಖಿಸಲಾಗಿಲ್ಲ. ಇದನ್ನು ಪ್ರಾಧಿಕಾರದ ವಿವೇಚನೆಗೆ ಬಿಡಲಾಗಿದೆ. ಸೆಕ್ಷನ್‌ 37ಎ ಚಲಾಯಿಸುವಾಗ ಸ್ವತಂತ್ರ ಮತ್ತು ಪ್ರಬಲವಾದ ಕಾರಣ ಇರಬೇಕು. ನಮ್ಮ ಖಾತೆಯಲ್ಲಿನ ₹5,000 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಇದನ್ನು ಹೇಗೆ ಮರಳಿಸುತ್ತಾರೆ? ಇದರಿಂದಾಗಿ ಈ ದೇಶದಲ್ಲಿ ನಾನು ಉದ್ಯಮ ನಡೆಸಲಾಗುತ್ತಿಲ್ಲ” ಎಂದರು.

“ಜಪ್ತಿ ಆದೇಶ ಮಾಡುವಾಗ ಸರ್ಕಾರದ ಪ್ರಾಧಿಕಾರಗಳು ಉಲ್ಲೇಖಿಸಿರುವ ಎಲ್ಲಾ ಜಮೆಗಳು ಕಾನೂನುಬದ್ಧ ಜಮೆಗಳಾಗಿವೆ. ಹೀಗಾಗಿ, ಅದು ಸೆಕ್ಷನ್‌ 4ರ ಅಡಿ ಉಲ್ಲಂಘನೆಯಲ್ಲ. ಏನನ್ನೂ ರಹಸ್ಯವಾಗಿ ಮಾಡಿಲ್ಲ” ಎಂದರು.

“ಶಓಮಿ ಬ್ಯಾಂಕ್‌ ಖಾತೆಯನ್ನು ಏಕೆ ಜಪ್ತಿ ಮಾಡಲಾಗುತ್ತಿದೆ ಎಂಬುದಕ್ಕೆ ಒಂದೇ ಒಂದು ವಿಚಾರವನ್ನು ಹೇಳಲಾಗಿಲ್ಲ. ಫೆಮಾದ ಸೆಕ್ಷನ್‌ 4ಅನ್ನು ಉಲ್ಲಂಘಿಸಿರುವ ಆರೋಪ ಬಂದ ಎಲ್ಲ ಪ್ರಕರಣಗಳಲ್ಲೂ ಸೆಕ್ಷನ್‌ 37ಎ ಚಲಾಯಿಸಬಹುದೇ?” ಎಂದರು.

ಆಗ ಪೀಠವು “ಆ ಪ್ರಶ್ನೆಯನ್ನು ನೀವು ನಮಗೆ ಹಾಕಿದರೆ. ಅದು ಆಗಬಹುದು. ಅದು ಸಾಧ್ಯವಿದೆ” ಎಂದು ಹೇಳುತ್ತೇವೆ ಎಂದಿತು.

ಇದಕ್ಕೆ ರಾಘವನ್‌ ಅವರು “ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರಬಲ್ಲ ಗಂಭೀರ ಕಾನೂನು ಪಿಎಂಎಲ್‌ಎದಲ್ಲೂ ಸಹ ಸುರಕ್ಷತಾ ಕ್ರಮಗಳಿವೆ” ಎಂದರು.  ವಾದ ಆಲಿಸಿದ ಪೀಠವು ವಿಚಾರಣೆಯನ್ನು ಡಿಸೆಂಬರ್‌ 12ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com