ಹೊಸ ಕ್ರಿಮಿನಲ್ ಕಾನೂನಿನಲ್ಲಿ ಐಪಿಸಿ ಸೆಕ್ಷನ್ 498 ಎ ಯಥಾವತ್ ನಕಲು: ಬದಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

ಪ್ರಾಯೋಗಿಕ ವಾಸ್ತವಗಳನ್ನು ಪರಿಗಣಿಸಿ ಭಾರತೀಯ ನ್ಯಾಯ ಸಂಹಿತೆಯ 85 ಮತ್ತು 86ನೇ ಸೆಕ್ಷನ್‌ಗಳನ್ನು ಬದಲಿಸುವಂತೆ ಶಾಸಕಾಂಗವನ್ನು ಕೇಳುತ್ತಿದ್ದೇವೆ ಎಂದು ನ್ಯಾಯಾಲಯ ನುಡಿದಿದೆ.
Bharatiya Nyaya Sanhita, 2023
Bharatiya Nyaya Sanhita, 2023
Published on

ಭಾರತೀಯ ನ್ಯಾಯ ಸಂಹಿತೆಯಲ್ಲಿರುವ (ಬಿಎನ್‌ಎಸ್‌) ಐಪಿಸಿ ಸೆಕ್ಷನ್‌ 498 ಎಯನ್ನು ಬದಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಶಾಸಕಾಂಗಕ್ಕೆ ಸುಪ್ರೀಂ ಕೋರ್ಟ್‌ ಒತ್ತಾಯಿಸಿದೆ.

ಪತ್ನಿಯನ್ನು ಕ್ರೂರವಾಗಿ ನಡೆಸಿಕೊಳ್ಳುವ ಪತಿ ಇಲ್ಲವೇ ಆತನ ಸಂಬಂಧಿಕರಿಗೆ ಐಪಿಸಿ ಸೆಕ್ಷನ್‌ 498 ಎ ಶಿಕ್ಷೆ ವಿಧಿಸುತ್ತದೆ.

ಬಿಎನ್‌ಎಸ್‌ನ 85 ಮತ್ತು 86ನೇ ಸೆಕ್ಷನ್‌ಗಳು ಐಪಿಸಿ ಸೆಕ್ಷನ್ 498 ಎಯ ಯಥಾವತ್‌ ನಕಲು ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಪ್ರಾಯೋಗಿಕ ವಾಸ್ತವಗಳನ್ನು ಪರಿಗಣಿಸಿ ಭಾರತೀಯ ನ್ಯಾಯ ಸಂಹಿತೆಯ 85 ಮತ್ತು 86ನೇ ಸೆಕ್ಷನ್‌ಗಳನ್ನು ಪರಿಶೀಲಿಸಿ ಬದಲಾಯಿಸುವಂತೆ ಶಾಸಕಾಂಗವನ್ನು ಕೇಳುತ್ತಿದ್ದೇವೆ ಎಂದು ನ್ಯಾಯಾಲಯ ನುಡಿದಿದೆ.

 ಸುಪ್ರೀಂ ಕೋರ್ಟ್‌ 2010 ರ ತೀರ್ಪಿನಲ್ಲಿ ತಿಳಿಸಿರುವಂತೆ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಮಾಡುವ ಸುಳ್ಳು ಆರೋಪಗಳ ಕುರಿತು ಬದಲಾವಣೆಗಳನ್ನು ತರಬೇಕಿದೆ.

ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರೌರ್ಯ ಪ್ರಕರಣವನ್ನು ರದ್ದುಗೊಳಿಸುವಾಗ ನ್ಯಾಯಾಲಯ ಈ ವಿಚಾರ ತಿಳಿಸಿತು. ವಿಚ್ಛೇದನ ಮತ್ತು ಪತಿ ಹೂಡಿದ್ದ ಕೌಟುಂಬಿಕ ದೌರ್ಜನ್ಯ ಮೊಕದ್ದಮೆಗೆ ಪ್ರತೀಕಾರವಾಗಿ ಪತ್ನಿ ಈ ಆರೋಪಗಳನ್ನು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಂತಹ ಪ್ರಕರಣಗಳಲ್ಲಿನ ಆರೋಪಗಳನ್ನು ವಿಪರೀತ ತಾಂತ್ರಿಕವಾಗಿ ತನಿಖೆ ಮಾಡುವುದು ವಿವಾಹವೆಂಬ ಸಂಸ್ಥೆಗೆ ಪ್ರತಿಕೂಲವಾಗಿಬಿಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪರಸ್ಪರರ ತಪ್ಪುಗಳನ್ನು ಸಹಿಸಿಕೊಳ್ಳುವುದೇ ಉತ್ತಮ ದಾಂಪತ್ಯದ ಅಡಿಪಾಯವಾಗಿದೆ ಎಂದು ಕೂಡ ಪೀಠ ಅಭಿಪ್ರಾಯಪಟ್ಟಿದೆ.

ಪ್ರತಿ ಕಿರಿಕಿರಿಯ ವೈವಾಹಿಕ ನಡೆಯೂ ಕ್ರೌರ್ಯಕ್ಕೆ ಸಮವಲ್ಲದ ಕಾರಣ ಪತಿಯನ್ನು ಸುಲಿಗೆ ಮಾಡಲು ಪೊಲೀಸರನ್ನು ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸಹ-ಆರೋಪಿಗಳ ವಿರುದ್ಧ ಪೊಲೀಸರು ಮುಕ್ತಾಯ ವರದಿ ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಮೇಲ್ಮನವಿಯನ್ನು ಪುರಸ್ಕರಿಸಿ ಪ್ರಕರಣದ ಸಂಬಂಧ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

ತೀರ್ಪಿನ ಪ್ರತಿಯನ್ನು ಕೇಂದ್ರ ಕಾನೂನು ಮತ್ತು ಗೃಹ ಕಾರ್ಯದರ್ಶಿಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ನ್ಯಾಯಾಲಯ ಸೂಚಿಸಿತು.   

Kannada Bar & Bench
kannada.barandbench.com