[ಕೌಟುಂಬಿಕ ದೌರ್ಜನ್ಯ] ಸಂತ್ರಸ್ತೆಗೆ ಸಹಾಯಹಸ್ತ ಚಾಚಲಿಲ್ಲ ಎಂದು ಸಂಬಂಧಿಗಳ ಮೇಲೆ ಪ್ರಕರಣ ಹೂಡಲಾಗದು: ಸುಪ್ರೀಂ

ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳಲ್ಲಿ, ಆರೋಪಿಯ ಕುಟುಂಬದ ಸದಸ್ಯರ ವಿರುದ್ಧದ ದೂರು ಮತ್ತು ಆರೋಪಗಳು ಸಾಧ್ಯವಾದಷ್ಟು ನಿರ್ದಿಷ್ಟವಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.
Supreme Court, Couples
Supreme Court, Couples
Published on

ಕೌಟುಂಬಿಕ ಹಿಂಸಾಚಾರದ ಆರೋಪ ಹೊತ್ತಿರುವ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಸಂತ್ರಸ್ತೆಗೆ ಬೆಂಬಲ ನೀಡಲಿಲ್ಲ ಎನ್ನುವ ಕಾರಣಕ್ಕೆ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

"ಕೌಟುಂಬಿಕ ಪ್ರಕರಣಗಳಲ್ಲಿ ದೂರುದಾರರ ರಕ್ಷಣೆಗೆ ಬಾರದೆ ಮತ್ತು ಮೂಕಪ್ರೇಕ್ಷಕರಾಗಿ ಉಳಿದಿರುವ ಆರೋಪಿಗಳ ಕುಟುಂಬದ ಸದಸ್ಯರನ್ನುದೂರುದಾರರು ಆರೋಪಿಸುವಂತಹ ಪ್ರವೃತ್ತಿ ಇದೆ. ಆದರೆ ಅವರ ವಿರುದ್ಧ ನಿರ್ದಿಷ್ಟ ಕೃತ್ಯದ ಆರೋಪ ಹೊರಿಸದೆ ಇದು ಕ್ರಿಮಿನಲ್ ಕೃತ್ಯವಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ವೇಳೆ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳಲ್ಲಿ, ಪ್ರತಿ ಆರೋಪಿ ಕುಟುಂಬ ಸದಸ್ಯರ ವಿರುದ್ಧ ದೂರು ಮತ್ತು ಆರೋಪಗಳನ್ನು ಸಾಧ್ಯವಾದಷ್ಟು ನಿರ್ದಿಷ್ಟವಾಗಿರಬೇಕು ಎಂದು ಪುನರುಚ್ಚರಿಸಿತು.

"ಸಂತ್ರಸ್ತೆಯ ವಿರುದ್ಧದ ಹಿಂಸೆಯ ಬಗ್ಗೆಯ ಆರೋಪಿಯ ಸಂಬಂಧಿಗಳ ಕೆಲ ಕುಟುಂಬ ಸದಸ್ಯರು ಕುರುಡುಗಣ್ಣಾಗಬಹುದು. ಸಹಾಯಹಸ್ತ ಚಾಚದೆ ಹೋಗಬಹುದು. ಹಾಗೆಂದು, ಕೃತ್ಯದಲ್ಲಿ ಅವರ ಭಾಗೀದಾರಿಕೆ ಅಥವಾ ಪ್ರೇರಣೆ ಇರುವುದನ್ನು ಯಾವುದೇ ನಿರ್ದಿಷ್ಟ ಸಂದರ್ಭಗಳು ಸೂಚಿಸದೆ ಹೋದಲ್ಲಿ ಅವರು ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗದು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇ ವೇಳೆ ಪೀಠವು, ಕೌಟುಂಬಿಕ ಹಿಂಸಾಚಾರದ ನೈಜ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ನಿರ್ವಹಿಸಬೇಕಾದ ಅಗತ್ಯತೆಯ ಬಗ್ಗೆಯೂ ಒತ್ತಿ ಹೇಳಿತು. ಅಪರಾಧವು ನಾಲ್ಕು ಗೋಡೆಗಳ ನಡುವೆ ನಡೆಯುತ್ತದೆಯೇ ಹೊರತು ಸಾರ್ವಜನಿಕ ಸ್ಥಳದಲ್ಲಿ ಅಲ್ಲದ ಕಾರಣ ನೇರ ಸಾಕ್ಷ್ಯವು ದೊರೆಯುವುದು ಸುಲಭವಲ್ಲ ಎನ್ನುವುದನ್ನು ಗುರುತಿಸಿತು.

ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ಮತ್ತು 506 ಹಾಗೂ ವರದಕ್ಷಿಣೆ ನಿಷೇಧ ಕಾಯಿದೆ, 1961ರ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸಿತು. ತೆಲಂಗಾಣ ಹೈಕೋರ್ಟ್ ಈ ಹಿಂದೆ ಪ್ರಕರಣದಲ್ಲಿನ ಪ್ರಮುಖ ಆರೋಪಿಯ ತಾಯಿಯ ಚಿಕ್ಕಮ್ಮ ಮತ್ತು ಸೋದರಸಂಬಂಧಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ.

Kannada Bar & Bench
kannada.barandbench.com