ಜಾತ್ಯತೀತ ಕಲ್ಪನೆಯನ್ನು ಹೊಸದಾಗಿ ಸೇರಿಸಿದ್ದಲ್ಲ, ಅದು ಸಂವಿಧಾನದಲ್ಲಿಯೇ ಅಂತರ್ಗತವಾಗಿದೆ: ನ್ಯಾ. ನಾಗಮೋಹನ್‌ ದಾಸ್‌

“ದೇಶದ ರಾಮಾಯಣ, ಮಹಾಭಾರತ ಹಳ್ಳಿ ಹಳ್ಳಿಯ ಜನರಿಗೆ ತಿಳಿದಿದೆ. ಅಂತೆಯೇ ಸಂವಿಧಾನದ ಆಶಯಗಳು ಕೂಡ ಜನರಿಂದ ಜನರಿಗೆ ಹರಡಬೇಕು” ಎಂದು ‌ʼಸಂವಿಧಾನ ಓದುʼ ಕೃತಿಯ ಲೇಖಕರೂ ಆದ ನ್ಯಾ. ನಾಗಮೋಹನ್‌ ದಾಸ್ ಆಶಯಿಸಿದರು.
Justice (Rtrd.) H N Nagamohan Das
Justice (Rtrd.) H N Nagamohan DasYoutube

ಜಾತ್ಯತೀತ ಎಂಬ ಪರಿಕಲ್ಪನೆ ಸಂವಿಧಾನದಲ್ಲಿಯೇ ಅಡಕವಾಗಿದೆ. ಅದನ್ನು 43ನೇ ತಿದ್ದುಪಡಿಯ ಮೂಲಕ ಪ್ರಸ್ತಾವನೆಯ ಭಾಗದಲ್ಲಿ ಉಲ್ಲೇಖಿಸಲಾಯಿತು ಎಂಬುದಾಗಿ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ದಾಸ್‌ ಅವರು ತಿಳಿಸಿದರು.

ಸಂವಿಧಾನ ದಿನದ ಅಂಗವಾಗಿ ಕೆರೆಕೋಣದ ಸಹಯಾನ ಸಂಘಟನೆ, ಸಮುದಾಯ, ಎಐಎಲ್‌ಎಯು ಕರ್ನಾಟಕ ರಾಜ್ಯ ಸಮಿತಿ, ಕೊಪ್ಪದ ತೆನೆ ಸಂಘಟನೆ, ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆಯ ಸಹಯೋಗದಲ್ಲಿ ʼಸಂವಿಧಾನ ಓದು ಅಭಿಯಾನ ಸಮಿತಿʼ ಹಮ್ಮಿಕೊಂಡಿದ್ದ ʼಸಂವಿಧಾನ ಓದುʼ ಪುಸ್ತಕದ ಕುರಿತ ಅಂತರ್ಜಾಲ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ಜಾತ್ಯತೀತ ಎಂಬ ಪರಿಕಲ್ಪನೆಯನ್ನು ಇತ್ತೀಚೆಗೆ ಪರಿಚಯಿಸಲಾಯಿತು ಎಂಬ ಕಲ್ಪನೆ ಇದೆ” ಎಂಬ ಕೇಳುಗರೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿದರು. “ಸಂವಿಧಾನದ ಅನೇಕ ಅನುಚ್ಛೇದಗಳನ್ನು ಗಮನಿಸಿದರೂ ಸಾಕು ಅವುಗಳಲ್ಲಿ ಜಾತ್ಯತೀತ ಮೌಲ್ಯ ಸಿಗುತ್ತದೆ. ಜಾತ್ಯತೀತತೆ ಎಂಬುದು ಧರ್ಮ ವಿರೋಧಿಯಲ್ಲ. ಅದರರ್ಥ ಧರ್ಮವನ್ನು ರಾಜಕೀಯದಿಂದ ಬಿಡಿಸುವುದಾಗಿದೆ. ಸರ್ಕಾರ ಯಾವುದೇ ಧರ್ಮವನ್ನು ಹೊಂದಿರತಕ್ಕದ್ದಲ್ಲ ಎಂದರ್ಥ. ಧರ್ಮಗಳ ಮಧ್ಯೆ ಸರ್ಕಾರ ತರತಮ ಮಾಡಬಾರದು ಎನ್ನುತ್ತದೆ ಜಾತ್ಯತೀತತೆ. ಸರ್ಕಾರ ರೂಪಿಸುವ ಕಾನೂನು ನೀತಿ ನಿರೂಪಣೆಗಳು ಯಾವುದೇ ಧಾರ್ಮಿಕ ಪ್ರಭಾವಕ್ಕೆ ಒಳಗಾಗಿರಬಾರದು ಎಂದು ಅದು ಹೇಳುತ್ತದೆ” ಎಂದು ʼಸಂವಿಧಾನ ಓದುʼ ಕೃತಿಯ ಲೇಖಕರೂ ಆಗಿರುವ ಅವರು ಸ್ಪಷ್ಟಪಡಿಸಿದರು.

“ತುರ್ತುಪರಿಸ್ಥಿತಿ ವೇಳೆ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ. ಅವುಗಳಲ್ಲಿ ಜಾತ್ಯತೀತತೆಗೆ ಸಂಬಂಧಿಸಿದ ತಿದ್ದುಪಡಿಯೂ ಒಂದು. ಮುಂದೆಯೂ ನೂರಾರು ತಿದ್ದುಪಡಿಗಳು ಆಗುತ್ತಲೇ ಇರುತ್ತವೆ. ಆಹಾರದ ಹಕ್ಕು, ಶಿಕ್ಷಣದ ಹಕ್ಕು ಉದ್ಯೋಗದ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾರ್ಪಡಿಸಲು ಇನ್ನಷ್ಟು ತಿದ್ದುಪಡಿಗಳಾಗಬೇಕಿದೆ” ಎಂದರು.

ಜಾತಿಗೊಂದು ನಿಗಮಗಳನ್ನು ಮಾಡುವುದು ವೋಟಿನ ರಾಜಕಾರಣದ ತಂತ್ರವೇ ಹೊರತು ಅದನ್ನು ಮಾಡುವುದು ಜನರ ಅಭಿವೃದ್ಧಿಗಾಗಿ ಅಲ್ಲ. ಉದಾಹರಣೆಗೆ ಅಲೆಮಾರಿ ಜನಾಂಗದ ವ್ಯಕ್ತಿಗೆ ಹಸು ಸಾಕುವಂತೆ ಹೇಳುವ ನಿಗಮಗಳಿವೆ. ಅಲೆಮಾರಿ ಹಸು ಹೇಗೆ ಸಾಕುತ್ತಾನೆ, ಅದಕ್ಕೆ ಮೇವು ಎಲ್ಲಿ ಬೆಳೆಯುತ್ತಾನೆ. ಅಂತೆಯೇ ಜಾತಿ ಆಧಾರಿತ ನಿಗಮಗಳು ಭ್ರಷ್ಟಾಚಾರದ ಕೂಪವಾಗಿವೆ” ಎಂದು ಟೀಕಿಸಿದರು.

 Banu Mushtaq, Senior Advocate
Banu Mushtaq, Senior Advocate

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವಕೀಲೆ ಬಾನು ಮುಷ್ತಾಕ್‌ ಅವರು “ಸೆಕ್ಯುಲರ್‌ ಎಂಬ ಉದಾತ್ತ ಕಲ್ಪನೆಯನ್ನು ಸಿಕ್ಯುಲರ್‌ ಎಂದು ಹೀಗಳೆಯಲಾಗುತ್ತಿದೆ. ಈ ದೇಶದ ಆತ್ಮವನ್ನು ನಾಶ ಪಡಿಸುವಂತಹ ಹುನ್ನಾರಕ್ಕೆ ಕೈಹಾಕಲಾಗಿದೆ. ನ್ಯಾಯಾಲಯಗಳು ತಳೆಯುತ್ತಿರುವ ಧೋರಣೆ ಬಗ್ಗೆ ಸ್ವತಃ ಹೈಕೋರ್ಟ್‌ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಇಂತಹ ಸಂದರ್ಭದಲ್ಲಿ ತನ್ನ ಹಾಡು ತನ್ನದು ಎಂಬಂತೆ ಯಾರನ್ನೂ ದೂರದೇ ನ್ಯಾ. ನಾಗಮೋಹನ್‌ ದಾಸ್‌ ಅವರು ಸಂವಿಧಾನದ ಓದು ಕೃತಿಯ ಮೂಲಕ ಸಂವಿಧಾನವನ್ನು ಜನಸಾಮಾನ್ಯರಿಗೆ ತಲುಪಿಸಿದರು. ವಿವೇಕಯುತ ಧ್ವನಿಯ ಮೂಲಕ ಧೈರ್ಯದಿಂದ ಸಂವಿಧಾನದ ಬಗ್ಗೆ ಮಾತನಾಡಿದರು. ಅವರ ಕೃತಿ ದೇಶದೆಲ್ಲೆಡೆ ಪಸರಿಸಿದೆ” ಎಂದರು.

 Vinaya Okkunda,  Writer, thinker
Vinaya Okkunda, Writer, thinker

ಹಿರಿಯ ಲೇಖಕಿ ಡಾ. ವಿನಯಾ ಒಕ್ಕುಂದ ಅವರು “ಭಾರತದ ಧರ್ಮ ಸಂವಿಧಾನ ಎಂದು ವಿದ್ಯಾರ್ಥಿಗಳು ಮಾತನಾಡುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿ ಪ್ರಭುತ್ವ ವರ್ತಿಸುತ್ತಿರುವಾಗ ಇದು ಅತ್ಯಂತ ಮಹತ್ವದ ಕಾರ್ಯವಾಗಿ ತೋರುತ್ತಿದೆ. ಯುವಜನರಲ್ಲಿ ಸಂವಿಧಾನದ ಮಹತ್ವವನ್ನು ತಿಳಿಸುವಲ್ಲಿ ನ್ಯಾ.‌ ನಾಗಮೋಹನ್‌ ದಾಸ್‌ ಅವರು ಬರೆದ ಕೃತಿ ಮಹತ್ವ ಪಡೆದಿದೆ” ಎಂದು ತಿಳಿಸಿದರು.

“ಸಂವಿಧಾನವನ್ನು ತಾಂತ್ರಿಕವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿದೆ. ಎಂಸಿಕ್ಯೂ ಮಾದರಿಯಲ್ಲಿ ಹಾಗೂ ಕೇವಲ ಅಂಕಗಳನ್ನು ಪಡೆಯುವ ಸಲುವಾಗಿ ಸಂವಿಧಾನವನ್ನು ಬೋಧಿಸಲಾಗುತ್ತಿದೆ. ಇದರ ಬದಲು ತಾತ್ವಿಕವಾಗಿ ಅದನ್ನು ಯುವಜನರು, ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಅಗತ್ಯವಿದೆ” ಎಂದರು.

Also Read
ಜಾತಿ ಅಸಮಾನತೆ ತಡೆಗೆ ರಾಜ್ಯದ ಹಸ್ತಕ್ಷೇಪ ಅನಿವಾರ್ಯ ಎಂಬುದು ಸಂವಿಧಾನಶಿಲ್ಪಿಗಳಿಗೆ ಗೊತ್ತಿತ್ತು: ನ್ಯಾ. ಚಂದ್ರಚೂಡ್‌

ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಿರಣ್‌ ಎಂ ಗಾಜನೂರು ವಿಶ್ವವಿದ್ಯಾಲಯವೊಂದು ಮಾಡಬಹುದಾದ ಕೆಲಸವನ್ನು ನ್ಯಾ, ನಾಗಮೋಹನ್‌ ದಾಸ್‌ ಮತ್ತು ಕೆಲವರು ಮಾಡುತ್ತಿರುವುದು ಹೆಮ್ಮೆ ಪಡುವಂತಹ ಸಂಗತಿ ಎಂದು ತಿಳಿಸಿದರು.

ಸಹಯಾನ ಸಂಘಟನೆಯ ವಿಠ್ಠಲ ಭಂಡಾರಿ ಪುಸ್ತಕ ರೂಪುಗೊಂಡ ಸಂದರ್ಭ ಕುರಿತು ಮಾತನಾಡಿದರು. ಪೀಪಲ್ಸ್‌ ಲಾಯರ್ಸ್‌ ಗಿಲ್ಡ್‌ನ ಅನೀಶ್‌ ಪಾಶಾ ಸ್ವಾಗತಿಸಿದರು. ಚಿಂತಕ ಶಾಂತಾರಾಮ ನಾಯಕ ಹಿಚ್ಕಡ, ಸಮುದಾಯ ಕರ್ನಾಟಕ ಸಂಘಟನೆಯ ಅಚ್ಯುತ ಪಾಲ್ಗೊಂಡರು.

Related Stories

No stories found.
Kannada Bar & Bench
kannada.barandbench.com