ದೇಶದ್ರೋಹದ ಕುರಿತ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ದೇಶ ʼಆಜಾದಿ ಕಾ ಅಮೃತ್ ಮಹೋತ್ಸವʼ ಆಚರಿಸುತ್ತಿರುವಾಗ ವಸಾಹತುಶಾಹಿ ಕಾಲದ ಕಾನೂನುಗಳನ್ನು ರದ್ದುಗೊಳಿಸುವ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಇಂತಹ ವಿವಿಧ ಕಾನೂನುಗಳನ್ನು ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ದೇಶದ್ರೋಹದ ಕುರಿತ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ
A1

ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ್ರೋಹವನ್ನು ಅಪರಾಧವಾಗಿ ಪರಿಗಣಿಸುವ ಐಪಿಸಿ ಸೆಕ್ಷನ್ 124 ಎ ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಎಸ್‌ ಜಿ ವೊಂಬತ್ಕೆರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ದೇಶವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ವಸಾಹತುಶಾಹಿ ಕಾನೂನುಗಳನ್ನು ತೊಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಸರ್ಕಾರ ವಿವಿಧ ವಸಾಹತುಶಾಹಿ ಕಾನೂನುಗಳನ್ನು ಮರುಪರಿಶೀಲಿಸಲು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರ್ಕಾರ ಹೇಳಿದೆ.

“ದೇಶದ್ರೋಹದ ಬಗ್ಗೆ ವ್ಯಕ್ತಪಡಿಸಲಾದ ವಿವಿಧ ಅಭಿಪ್ರಾಯಗಳನ್ನು ಭಾರತ ಸರ್ಕಾರ ಸಂಪೂರ್ಣ ಅರಿತಿದ್ದು ಈ ಮಹಾನ್ ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗೆಗಿನ ಕಾಳಜಿಯನ್ನು ಪರಿಗಣಿಸಿ, ಮರುಪರಿಶೀಲಿಸಲು ನಿರ್ಧರಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A ನ ನಿಬಂಧನೆಗಳನ್ನು ಮರುಪರಿಶೀಲಿಸಲಿದೆ. ಇವನ್ನು ಸಕ್ಷಮ ವೇದಿಕೆಯ ಮುಂದೆ ಮಾತ್ರವೇ ಮಾಡಬಹುದಾಗಿದೆ" ಎಂದು ಅಫಿಡವಿಟ್ ಹೇಳಿದೆ.

ಹೀಗಾಗಿ ಸದ್ಯಕ್ಕೆ ಸೆಕ್ಷನ್ 124 ಎ ಸಿಂಧುತ್ವವನ್ನು ಪರಿಶೀಲಿಸಲು ಸಮಯ ವ್ಯಯಿಸಬಾರದು ಮತ್ತು ಮರುಪರೀಶೀಲನಾ ಪ್ರಕ್ರಿಯೆಗೆ ಕಾಯಬೇಕು ಎಂದು ಅದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಐಪಿಸಿಯ ಸೆಕ್ಷನ್ 124ಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಯೋಧ, ಕರ್ನಾಟಕ ಮೂಲದ ಎಸ್ ಜಿ ವೊಂಬತ್ಕೆರೆ ಹಾಗೂ ಮಾಧ್ಯಮ ಸಂಪಾದಕರ ಸಂಘಟನೆ 'ಎಡಿಟರ್ಸ್ ಗಿಲ್ಡ್' ಸಲ್ಲಿಸಿದ್ದ ಮನವಿಗಳಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com