ಬೀದರ್‌ನ ಶಾಹೀನ್‌ ಶಾಲೆಯ ನಾಲ್ವರು ಆಡಳಿತ ಮಂಡಳಿ ಸದಸ್ಯರ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಶಾಹೀನ್‌ ಶಾಲೆಯಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಸಂಬಂಧಿಸಿದಂತೆ 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಸಂಭಾಷಣೆ ಇತ್ತು ಎಂದು ಆರೋಪಿಸಲಾಗಿತ್ತು.
Karnataka HC (Kalburgi Bench) and Justice Hemant Chandangoudar
Karnataka HC (Kalburgi Bench) and Justice Hemant Chandangoudar

ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಕುರಿತು ಬೀದರ್‌ ಶಾಹೀನ್‌ ಶಾಲೆಯ ಮಕ್ಕಳು ನಾಟಕ ಪ್ರದರ್ಶಿಸಿದ್ದಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ನಾಲ್ವರ ವಿರುದ್ಧ ದಾಖಲಿಸಿದ್ದ ದೇಶದ್ರೋಹ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಬುಧವಾರ ವಜಾ ಮಾಡಿದೆ.

ಶಾಹೀನ್‌ ಶಾಲೆಯ ಮುಖ್ಯಸ್ಥರಾದ ಅಲ್ಲಾವುದ್ದೀನ್‌, ಅಬ್ದುಲ್‌ ಖಾಲೀಕ್‌, ಮೊಹಮ್ಮದ್‌ ಬಿಲಾಲ್‌ ಇನಾಂದರ್‌ ಮತ್ತು ಮೊಹಮ್ಮದ್‌ ಮೆಹ್ತಾಬ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಸಾಮಾಜಿಕ ಕಾರ್ಯಕರ್ತ ಎನ್ನಲಾದ ನೀಲೇಶ್‌ ರಕ್ಷ್ಯಾಲ್‌ ಎಂಬುವರು ನೀಡಿದ್ದ ದೂರಿನ ಮೇರೆಗೆ ಬೀದರ್‌ ನ್ಯೂ ಟೌನ್‌ ಠಾಣೆಯಲ್ಲಿ ಶಾಹೀನ್‌ ಶಾಲೆಯ ಆಡಳಿತ ಮಂಡಳಿಯ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 504, 505 (2), 124ಎ, 153ಎ ಜೊತೆಗೆ ಸೆಕ್ಷನ್‌ 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಈಗ ನ್ಯಾಯಾಲಯ ವಜಾ ಮಾಡಿದೆ.

Also Read
[ಶಾಹೀನ್‌ ಶಾಲೆ ಮಕ್ಕಳ ವಿಚಾರಣೆ ಪ್ರಕರಣ] ಐವರು ಪೊಲೀಸರಿಗೆ ಶೋಕಾಸ್‌ ನೋಟಿಸ್‌: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಪ್ರಕರಣದ ಹಿನ್ನೆಲೆ: ಶಾಹೀನ್‌ ಶಾಲೆಯಲ್ಲಿ ಸಿಎಎ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧಿಸಿದಂತೆ 4, 5 ಮತ್ತು ಆರನೇ ತರಗತಿ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಸಂಭಾಷಣೆ ಇತ್ತು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯ ನೀಲೇಶ್‌ ರಕ್ಷ್ಯಾಲ್‌ ದೂರು ದಾಖಲಿಸಿದ್ದರು. ಸಂಸತ್‌ನಲ್ಲಿ ಒಪ್ಪಿಗೆ ಪಡೆದ ಸಿಎಎ ವಿರುದ್ಧ ಮಕ್ಕಳಲ್ಲಿ ತಪ್ಪು ಮಾಹಿತಿ ಬಿತ್ತಲು ಶಾಲಾ ಆಡಳಿತ ಪ್ರಯತ್ನಿಸಿದ್ದು, ಈ ಮೂಲಕ ಕೋಮು ಪ್ರಚೋದನೆಗೆ ನಾಂದಿ ಹಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಪ್ರಕರಣದ ವಿಚಾರಣೆಯ ಹಂತದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಮತ್ತು ವಿದ್ಯಾರ್ಥಿಯೊಬ್ಬರ ತಾಯಿ ನಜೀಬುನ್ನೀಸಾ ಅವರನ್ನು ಬಂಧಿಸಲಾಗಿತ್ತು. ಆನಂತರ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com