ಮಹತ್ವದ ಪರಿಣಾಮ ಬೀರುವ ಮಧ್ಯಂತರ ಆದೇಶವೊಂದರಲ್ಲಿ ಸುಪ್ರೀಂ ಕೋರ್ಟ್ ದೇಶದ್ರೋಹವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 124 ಎ ಬಳಕೆ ನಿರ್ಬಂಧಿಸಲು ಸೂಚನೆಗಳನ್ನು ನೀಡಿದೆ.
ದೇಶದ್ರೋಹ ಕಾನೂನು ಜಾರಿ ಬಗ್ಗೆ ಪೂರ್ಣ ತಡೆ ನೀಡದಿದ್ದರೂ ಕಾನೂನಿನಡಿ ಆರೋಪಿತರಾದವರನ್ನು ಇಲ್ಲವೇ ಮುಂದೆ ಈ ಕಾಯಿದೆಯಡಿ ಶಿಕ್ಷೆಗೊಳಗಾಗುವವರನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದೇಶದ ಕೆಲ ಪ್ರಮುಖ ಸಂಗತಿಗಳು ಇಲ್ಲಿವೆ:
ಬಾಕಿ ಪ್ರಕರಣಗಳು, ಮೇಲ್ಮನವಿ ಹಾಗೂ ಸೆಕ್ಷನ್ 124 ಎ ಅಡಿಯ ವಿಚಾರಣೆ ಕುರಿತು:
ಸೆಕ್ಷನ್ 124A ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳು, ಮೇಲ್ಮನವಿ ಹಾಗೂ ವಿಚಾರಣೆಗಳನ್ನು ತಡೆಹಿಡಿಯುವಂತೆ ಆದೇಶಿಸಿರುವ ನ್ಯಾಯಾಲಯ ಇತರೆ ಅಪರಾಧಗಳಿಗೆ ಸಂಬಂಧಿಸಿದಂತೆ ನ್ಯಾಯ ನಿರ್ಣಯ ಪ್ರಕ್ರಿಯೆ ಮುಂದುವರೆಯಲಿದೆ ಎಂದಿದೆ.
ಹೊಸ ಪ್ರಕರಣಗಳು
ಕೇಂದ್ರ ಸರ್ಕಾರ ಸೆಕ್ಷನ್ 124 ಎ ಮರುಪರಿಶೀಲನೆ ನಡೆಸುವವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಾನೂನಿನಡಿ ಯಾವುದೇ ಎಫ್‌ಐಆರ್ ದಾಖಲಿಸುವುದರಿಂದ, ತನಿಖೆ ಮುಂದುವರೆಸುವುದರಿಂದ ಅಥವಾ ಬಲವಂತದ ಕ್ರಮ ಕೈಗೊಳ್ಳುವುದರಿಂದ ದೂರ ಇರುತ್ತವೆ ಎಂದು ನಾವು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಹೊಸದಾಗಿ ಪ್ರಕರಣ ದಾಖಲಿಸಿದರೆ ಕಕ್ಷಿದಾರರಿಗೆ ನ್ಯಾಯಾಲಯಗಳನ್ನು ಸಂಪರ್ಕಿಸಲು ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
“ಈಗ ನೀಡುತ್ತಿರುವ ಆದೇಶ ಮತ್ತು ಭಾರತ ಒಕ್ಕೂಟದ ಸ್ಪಷ್ಟ ನಿಲುವನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಕೋರಿ ಬರುವ ಅರ್ಜಿಗಳನ್ನು ನ್ಯಾಯಾಲಯಗಳು ಪರಿಶೀಲಿಸಬೇಕು ಎಂದು ವಿನಂತಿಸಲಾಗಿದೆ” ಎಂದು ಆದೇಶ ತಿಳಿಸಿದೆ.
ಹೆಚ್ಚುವರಿ ನಿರ್ದೇಶನಗಳು
ಸೆಕ್ಷನ್ 124 ಎ ದುರ್ಬಳಕೆ ತಡೆಯುವ ಸಲುವಾಗಿ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಾಗಿರುವ ನಿರ್ದೇಶನಗಳನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲು ಕೇಂದ್ರ ಸರ್ಕಾರಕ್ಕೆ ಸ್ವಾತಂತ್ರ್ಯ ಇದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: