[ರಾಷ್ಟ್ರದ್ರೋಹ] ಐಪಿಸಿ ಸೆಕ್ಷನ್‌ 124ಎ ಉಳಿಸಿಕೊಳ್ಳಬೇಕು; ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕು ಎಂದ ಕಾನೂನು ಆಯೋಗ

ಐಪಿಸಿ ಸೆಕ್ಷನ್‌ 124ಎ ಅಡಿ ಅಪರಾಧಕ್ಕೆ ಜೀವಾವಧಿ ಅಥವಾ ಮೂರು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ. ಜೈಲು ಶಿಕ್ಷೆಯನ್ನು 3ರಿಂದ 7 ವರ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗವು ಸಲಹೆ ನೀಡಿದೆ.
Sedition
Sedition

ರಾಷ್ಟ್ರದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 124ಎಗೆ ಕೆಲವು ಮಾರ್ಪಾಡು ಮಾಡಿ, ಅದನ್ನು ಹಾಗೆ ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ 22ನೇ ಭಾರತೀಯ ಕಾನೂನು ಆಯೋಗದ ಮುಖ್ಯಸ್ಥರಾಗಿರುವ ರಿತುರಾಜ್‌ ಅವಸ್ಥಿ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಐಪಿಸಿ ಸೆಕ್ಷನ್‌ 124ಎ ಅನ್ನು ಹಾಗೆಯೇ ಉಳಿಸಿಕೊಳ್ಳಬೇಕೆ ಎಂಬುದನ್ನು ಮರು ಪರಿಶೀಲಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 124ಎ ಸಿಂಧುತ್ವ ನಿರ್ಧರಿಸುವುದಕ್ಕೆ ಬದಲಾಗಿ, ಅದನ್ನು ಅಮಾನತಿನಲ್ಲಿರಿಸಿ 2022ರ ಮೇ 11ರಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪು ನೀಡಿತ್ತು.

ಐಪಿಸಿ ಸೆಕ್ಷನ್‌ 124ಎ ಅನ್ನು ಹಾಗೆ ಉಳಿಸಿಕೊಳ್ಳಬೇಕು. ಸಲಹೆ ನೀಡಿರುವಂತೆ ಕೆಲವೊಂದು ಮಾರ್ಪಾಡು ಮಾಡಬಹುದಾಗಿದೆ. ಕೇದಾರನಾಥ್‌ ಸಿಂಗ್‌ ವರ್ಸಸ್‌ ಬಿಹಾರ ರಾಜ್ಯ ಪ್ರಕರಣದಲ್ಲಿ ಸಲಹೆ ಮಾಡಿರುವಂತೆ ಆ ನಿಬಂಧನೆಯ ಬಳಕೆ ಮಾಡುವ ನಿಟ್ಟಿನಲ್ಲಿ ಸ್ಪಷ್ಟತೆ ತರಬಹುದಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

ಐಪಿಸಿ ಸೆಕ್ಷನ್‌ 124ಎ ಅಡಿ ಉಲ್ಲೇಖಿಸಿರುವ ಶಿಕ್ಷೆಯನ್ನು ತಿದ್ದುಪಡಿ ಮಾಡಬಹುದಾಗಿದೆ. ಸದ್ಯಕ್ಕೆ ಐಪಿಸಿ ಸೆಕ್ಷನ್‌ 124ಎ ಅಡಿ ಜೀವಾವಧಿ ಅಥವಾ ಮೂರು ವರ್ಷಗಳ ಸಜೆ ವಿಧಿಸಲು ಅವಕಾಶ ಮಾಡಲಾಗಿದೆ. ಆಯೋಗವು ಜೈಲು ಶಿಕ್ಷೆಯನ್ನು 3 ವರ್ಷಗಳಿಂದ 7 ವರ್ಷಗಳಿಗೆ ಹೆಚ್ಚಳ ಮಾಡಲು ಸಲಹೆ ಮಾಡಿದೆ.

Also Read
[ರಾಷ್ಟ್ರದ್ರೋಹ ಪ್ರಕರಣ] ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದ ಪೊಲೀಸರ ವಿರುದ್ಧ ಕ್ರಮ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಬೇರೆ ದೇಶಗಳಲ್ಲಿ ರಾಷ್ಟ್ರದ್ರೋಹ ರದ್ದುಪಡಿಸಿವೆ ಎಂಬ ವಾದಕ್ಕೆ ನ್ಯಾ. ಅವಸ್ಥಿ ಅವರ ನೇತೃತ್ವದ ಆಯೋಗವು “ಕೆಲವು ದೇಶಗಳು ಐಪಿಸಿ ಸೆಕ್ಷನ್‌ 124ಎ ರದ್ದುಪಡಿಸಿವೆ ಎಂದು ಅದನ್ನು ರದ್ದುಪಡಿಸುವುದು ಭಾರತದಲ್ಲಿ ಅಸ್ತಿತ್ವದಲ್ಲಿರುವ ವಾಸ್ತವಕ್ಕೆ ಬೆನ್ನು ತಿರುಗಿಸಿದಂತೆ” ಎಂದು ಹೇಳಿದೆ.

ಇದು ವಸಹಾತು ಶಾಹಿ ಕಾಲದ ಕಾನೂನಾಗಿರುವುದರಿಂದ ಅದನ್ನು ರದ್ದುಪಡಿಸಬೇಕು ಎಂಬ ವಾದಕ್ಕೆ ಉತ್ತರಿಸಿರುವ ಆಯೋಗವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರವಾಗಿ ತಮ್ಮ ಸರ್ಕಾರವನ್ನು ಟೀಕಿಸುವ ಸ್ವಾತಂತ್ರ್ಯ ಜನರಿಗೆ ಇದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಚಲಾಯಿಸುವ ನೆಪದಲ್ಲಿ ಹಿಂಸೆಯನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಉಂಟು ಮಾಡುವುದಕ್ಕೆ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com