
ನಟ ದರ್ಶನ್ ಬಲಗೈಗೆ ಶಸ್ತ್ರಚಿಕಿತ್ಸೆಯಾಗಿದ್ದು, ರಾಡ್ ಹಾಕಲಾಗಿದೆ. ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿರುವುದರಿಂದ ಚಳಿಯಿಂದ ಕೈನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಒಂದು ಬೆರಳಂತೂ ಅಲುಗಾಡಿಸಲೂ ಆಗುತ್ತಿಲ್ಲ. ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚಗಿನ ವಸ್ತುಗಳಿಂದ ಕೈ ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕಿದೆ. ಇದರಿಂದ ಹಾಸಿಗೆ, ಹೊದಿಕೆ ಹಾಗೂ ದಿಂಬು ಸೇರಿ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ದರ್ಶನ್ ಪರ ವಕೀಲರು ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಬುಧವಾರ ಕೋರಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಲಕ್ಷ್ಮಣ್ ಸೇರಿ ಐವರು ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಸಲ್ಲಿಸಿರುವ ಅರ್ಜಿ ಮತ್ತು ಜೈಲಿನಲ್ಲಿ ಹಾಸಿಗೆ-ಹೊದಿಕೆ ಇತರೆ ಸೌಲಭ್ಯ ಕಲ್ಪಿಸಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಐ ಪಿ ನಾಯ್ಕ್ ಅವರು ಸೆ.9ರಂದು ಆದೇಶ ನೀಡುವುದಾಗಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಕೀಲ ಎಸ್ ಸುನೀಲ್ ಕುಮಾರ್ ಅವರು “ದರ್ಶನ್ ಬಲಗೈಗೆ ಶಸ್ತ್ರ ಚಿಕಿತ್ಸೆಯಾಗಿದೆ. ಅವರ ಕೈಗೆ ರಾಡ್ ಅಳವಡಿಸಲಾಗಿದೆ. ಈಗ ಅವರು ಬೆಂಗಳೂರಿನ ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿದ್ದಾರೆ. ನೆಲದ ಮೇಲೆ ಚಳಿ ಇರುವುದರಿಂದ ಕೈನಲ್ಲಿ ನೋವು ಕಾಣಿಸಿಕೊಂಡಿದೆ. ಒಂದು ಬೆರಳಂತೂ ಅಲುಗಾಡಿಸಲು ಸಹ ಆಗುತ್ತಿಲ್ಲ. ಇದರಿಂದ ಕೈಯನ್ನು ಬೆಚ್ಚಗಿನ ವಸ್ತುಗಳಿಂದ ಮುಚ್ಚಿಕೊಳ್ಳಬೇಕಿದೆ. ಹಾಗಾಗಿಯೇ ಬಟ್ಟೆ, ಹಾಸಿಗೆ, ತಲೆದಿಂಬು ಒದಗಿಸಲು ಕೋರಲಾಗಿದೆ. ಅದಕ್ಕೆ ಜೈಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ” ಎಂದು ಆಕ್ಷೇಪಿಸಿದರು.
“ದರ್ಶನ್ ಸೆಲೆಬ್ರಿಟಿ ಆಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್, ಈಗ ರಾಜ್ಯ ಕಾರಗೃಹಗಳ ಡಿಜಿಪಿಯಾಗಿದ್ದಾರೆ. ಅವರ ಸೂಚನೆ ಮೇರೆಗೆ ದರ್ಶನ್ ಹಾಗೂ ಇತರೆ ಅರ್ಜಿದಾರರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಜೈಲು ಅಧಿಕಾರಿಗಳಿಗೆ ಪ್ರಶಸ್ತಿ ಕೊಡುವುದಾಗಿ ಡಿಜಿಪಿ ಹೇಳಿದ್ದಾರೆ” ಎಂದು ಆರೋಪಿಸಿದರು.
“ಪ್ರಕರಣವೊಂದರಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ಆರೋಪಿ ವೈದ್ಯನಿಗೆ ವಿಶೇಷ ಸೌಲಭ್ಯ ಕೊಡಲಾಗಿದೆ. ಆದರೆ, ದರ್ಶನ್‌ಗೆ ಮಾತ್ರ ಕನಿಷ್ಠ ಸೌಲಭ್ಯ ಕೊಡುತ್ತಿಲ್ಲ. ಈ ತಾರತಮ್ಯಕ್ಕೆ ಕಾರಾಗೃಹ ಡಿಜಿಪಿ ದಯಾನಂದ ಅವರೇ ಕಾರಣ. ಇನ್ನೂ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಸೆಲ್‌ನಿಂದ ಹೊರಗೆ ಬರಲು ಬಿಡುತ್ತಿಲ್ಲ. ದರ್ಶನ್ ಜೈಲು ಸೇರಿ ಒಂದು ತಿಂಗಳು ಆಗುತ್ತಾ ಬರುತ್ತಿದೆ. ಕುಟುಂಬ ಸದಸ್ಯರೊಂದಿಗೆ ಪೋನ್ ಮೂಲಕ ಮಾತನಾಡಲು ಅವಕಾಶ ನೀಡಿಲ್ಲ. ವಿಡಿಯೋ ಕಾನ್ಫರೆನ್ಸ್ ಗೆ ಕೂಡ ಅವಕಾಶ ನೀಡಿಲ್ಲ” ಎಂದು ಸುನೀಲ್ ಆರೋಪಿಸಿದರು.
“ದರ್ಶನ್‌ಗೆ ಒಂದು ಕೋಣೆಯಲ್ಲಿ ಏಕಾಂತವಾಗಿ ಶಿಕ್ಷೆ ಅನುಭವಿಸುವಂತೆ ಮಾಡಲಾಗಿದೆ. ದರ್ಶನ್‌ಗೆ ಟಿವಿ- ಪೇಪರ್ ಸಹ ಸಿಗುತ್ತಿಲ್ಲ. ಇದರಿಂದ ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ? ತಮ್ಮ ಪ್ರಕರಣದ ವಿಚಾರಣೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ. ಕಾನೂನು ಪ್ರಕಾರ ದರ್ಶನ್‌ಗೆ ಅಗತ್ಯ ಸೌಲಭ್ಯಗಳನ್ನು ಕೊಡಬೇಕು” ಎಂದು ಕೋರಿದರು.
ಪರಪ್ಪನ ಅಗ್ರಹಾರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರಲ್ಲಿ ಯಾರನ್ನೂ ಸಹ ವರ್ಗಾವಣೆ ಮಾಡಲು ಜೈಲು ಅಧಿಕಾರಿಗಳು ಆಸಕ್ತಿ ತೋರಿಲ್ಲ. ಕೇವಲ ಅರ್ಜಿದಾರರ ವರ್ಗಾವಣೆಗೆ ಕೋರಲಾಗಿದೆ. ಕಾರಾಗೃಹಗಳ ಕಾಯಿದೆ-1963ರ ಸೆ.8ರ ಪ್ರಕಾರ ಮರಣದಂಡನೆ, ಜೀವಾವಧಿ ಶಿಕ್ಷೆಗೆ ಒಳಗಾದ, ದಂಡ ಮೊತ್ತ ಪಾವತಿಸದ ಹಾಗೂ ಸನ್ನಡತೆ ತೋರದ, ಜೈಲಿನಲ್ಲಿ ಶಾಂತಿ ಹಾಳು ಮಾಡುವ ಕೈದಿಗಳನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ವರ್ಗಾವಣೆ ಮಾಡಲು ಅವಕಾಶವಿದೆ. ಆದರೆ ದರ್ಶನ್ ಸೇರಿ ಎಲ್ಲಾ ಅರ್ಜಿದಾರರು ಸನ್ನಡತೆ ತೋರಿದ್ದಾರೆ. ಅರ್ಜಿದಾರರು ಜೈಲಿಗೆ ಹೋದ ಎರಡನೇ ದಿನದಲ್ಲಿ ವರ್ಗಾವಣೆಗೆ ಜೈಲು ಅಧಿಕಾರಿಗಳು ಕೋರಿದ್ದಾರೆ. ಅವರ ಈ ಅರ್ಜಿಗಳು ಊರ್ಜಿತವಲ್ಲ ಎಂದು ಆಕ್ಷೇಪಿಸಿದ ವಕೀಲರು, ಅರ್ಜಿದಾರರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡದಂತೆ ಆದೇಶಿಸಬೇಕು ಎಂದು ಕೋರಿದರು.
ನಟ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ನಿರಾಕರಿಸಬೇಕು. ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಕೋರಿ ಅಪರಿಚಿತ ವ್ಯಕ್ತಿಯೊಬ್ಬರು ಕೈಯಲ್ಲಿ ಅರ್ಜಿ ಹಿಡಿದು ಕೋರ್ಟ್ ಹಾಲ್ ಗೆ ನುಗ್ಗಿದ ಘಟನೆ ನಡೆಯಿತು. ಇದರಿಂದ ಕೆಲ ಕಾಲ ಗೊಂದಲ ಉಂಟಾಯಿತು.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಗೊಂದಲಕ್ಕೊಳಗಾದ ನ್ಯಾಯಾಧೀಶರು, ‘ಯಾರು ನೀನು?’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆ ವ್ಯಕ್ತಿ, ‘ನಾನು ರವಿ ಬೆಳಗೆರೆ ಕಡೆಯವನು’ ಎಂದರು. ನ್ಯಾಯಾಧೀಶರು ಪ್ರತಿಕ್ರಿಯಿಸಿ, ಯಾರಾರೋ ನೀಡುವ ಅರ್ಜಿಯನ್ನು ಕೋರ್ಟ್ ಪಡೆಯಲಾಗದು. ನೀನು ಏನೇ ಇದ್ದರೂ ಸರ್ಕಾರದ ಮುಖಾಂತರ ಬರಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಕಾನೂನು ಪ್ರಕಾರವೇ ನಡೆಯುತ್ತದೆ. ಹೊರಗಿನ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ನೀನು ಅರ್ಜಿಯನ್ನು ತೆಗೆದುಕೊಂಡು ಹೋಗು ಎಂದು ಅನಾಮಿಕನಿಗೆ ವ್ಯಕ್ತಿಗೆ ಸೂಚಿಸಿದರು. ನ್ಯಾಯಾಧೀಶರ ಸೂಚನೆಯಿಂದ ಆ ವ್ಯಕ್ತಿ ಕೋರ್ಟ್ ಹಾಲ್‌ನಿಂದ ಹೊರ ನಡೆದರು.